ಬೆಳಗಾವಿ – ಜಾರಕಿಹೊಳಿ ಕುಟುಂಬ ಜನಸಂಘದಿಂದ ಬಂದಿದ್ದು, ಅನಿವಾರ್ಯ ಕಾರಣದಿಂದ ನಾವು ಕಾಂಗ್ರೆಸ್ ಗೆ ಹೋಗಬೇಕಾಯಿತು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೊಸ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಧನಂಜಯ ಜಾಧವ ಮಿತ್ರ ಪರಿವಾರ ಸಂಘಟಿಸಿದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನಾವು ಬಂದಿದ್ದು ಜನಸಂಘದಿಂದ, ಹಾಫ್ ಚಡ್ಡಿ ಹಾಕುತ್ತಿದ್ದೆವು. ಮೊದಲು ಜನಸಂಘದಲ್ಲಿ ದೀಪದ ಚಿತ್ರ ಇದ್ದ ಕರಿ ಟೋಪಿ ಹಾಕುತ್ತಿದ್ದೆವು. ಸಂಘಟನೆಗಾಗಿ ನಮ್ಮ ತಂದೆ ಮೂರು ತಿಂಗಳು ಜೈಲಿನಲ್ಲಿದ್ದರು ಎಂದು ಅವರು ಹೇಳಿದರು.
ಸುರೇಶ್ ಅಂಗಡಿಯವರಿಗೆ ಒಂದು ಬಾರಿ ಜನಸಂಘದ ಚಿಹ್ನೆ ಬಗ್ಗೆ ಕೇಳಿದ್ದೆ. ಜನಸಂಘದ ಚಿತ್ರ ಸುರೇಶ ಅಂಗಡಿಯವರಿಗೆ ಗೊತ್ತಿರಲಿಲ್ಲ. ನಮ್ಮ ತಂದೆಯವರು ಜಗನ್ನಾಥ ಜೋಶಿಯವರ ಅನುಯಾಯಿ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳ ಆಕಾಂಕ್ಷಿಗಳಿದ್ದಾರೆ. ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಯಾರಿಗೆ ಟಿಕೆಟ್ ಸಿಕ್ಕರೂ ಪಕ್ಷದ ಪರವಾಗಿ ಕೆಲಸ ಮಾಡಬೇಕು. ದ್ರೋಹ ಮಾಡುವುದಿಲ್ಲ ಎಂದು ಮಹಾರಾಷ್ಟ್ರದ ಜ್ಯೋತಿಬಾ ದೇವರ ಪಾದ ಮುಟ್ಟಿ ಆಣೆ ಮಾಡಬೇಕು ಎಂದರು.
2023ರಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುತ್ತೇನೆ. ಜನವರಿ 17ರಂದು ಬೆಳಗಾವಿಯಲ್ಲಿ ಅಮಿತ್ ಶಾ ಕಾರ್ಯಕ್ರಮ ಇದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಒಂದು ಲಕ್ಷ ಜನ ಬರಬೇಕು. ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ಮೂರರಿಂದ ನಾಲ್ಕು ಲಕ್ಷ ಜನ ಸೇರಿಸುವ ಸಂಕಲ್ಪ ಮಾಡಿದ್ದೇವೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
Laxmi News 24×7