ಬೀದರ್, ಜುಲೈ 09: ಬೀದರ್ (Farmers) ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬೀದರ್ (Bidar) ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಕಬ್ಬು, ಉದ್ದು, ಹಸಿರು ಕಾಳು, ಸೋಯಾಬಿನ್, ಶುಂಠಿ ಹೀಗೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಜಿಲ್ಲೆಯ ಒಂದಷ್ಟು ಕಡೆ ನೀರಾವರಿಯ ಸೌಲಭ್ಯವೂ ಇದೆ. ಆದರೆ, ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಎರಡೂವರೆ ವರ್ಷದಲ್ಲಿ ಬೀದರ್ ಜಿಲ್ಲೆಯೊಂದರಲ್ಲೇ ಬರೋಬ್ಬರಿ 132 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುತೇಕ ರೈತರ ಆತ್ಮಹತ್ಯೆಗೆ ಬ್ಯಾಂಕ್ ಹಾಗೂ ಖಾಸಗಿ ಸಾಲ ಕಾರಣವಾಗಿರುವುದು ಸ್ಪಷ್ಟವಾಗಿದೆ.
ಬರಗಾಲ, ಸಾಲ, ಮತ್ತಿತರೆ ಕಾರಣಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರಕಾರದ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳಿದ್ದ ಮೇಲೂ ರೈತರ ಸರಣಿ ಆತ್ಮಹತ್ಯೆ ನಿಲ್ಲದಿರುವುದು ಕಳವಳಕಾರಿಯಾದ ಬೆಳವಣಿಗೆಯಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಲಿಕ್ಕೆ ಸರಕಾರ ಕಾರಣ ಎಂದು ರೈತ ಮುಂಖಡರು ಆರೋಪ ಮಾಡಿದ್ದಾರೆ.
ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರು ಬೆಳೆ ಕಳೆದುಕೊಂಡರೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪರಿಹಾರ ಸಿಗುತ್ತಿದೆ. ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಕೂಡ ರೈತರು ಸದೃಢವಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬುವುದು ದುರಾದೃಷ್ಟಕರ ಸಂಗತಿ. ಮಳೆಯೂ ಕೂಡ ಜಿಲ್ಲೆಯ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರೆ ತಪ್ಪಾಗದು. ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿ. ಎರಡು ರೀತಿಯಿಂದಲೂ ರೈತರಿಗೆ ನಷ್ಟವಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬರಗಾಲ ಜಿಲ್ಲೆಯಲ್ಲಿ ಮಂಡಿಯೂರಿದ್ದು, ರೈತ ಕುಸಿದು ಹೋಗುವಂತಾಗಿದೆ.