Breaking News

ಜಾನುವಾರು ಗಣತಿಗೆ ಸುಧಾರಿತ ತಂತ್ರಜ್ಞಾನ

Spread the love

ಬೆಳಗಾವಿ: ದೋಷರಹಿತ ಜಾನುವಾರು ಗಣತಿಗಾಗಿ ಕೇಂದ್ರ ಸರ್ಕಾರ ‘ಲೈವ್‌ಸ್ಟಾಕ್‌ ಸೆನ್ಸಸ್‌’ ಎಂಬ ‘ಆಯ‍ಪ್‌’ ಸಿದ್ಧಪಡಿಸಿದೆ. ಅದರ ನೆರವಿನಿಂದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಮೂರು ಹಂತದ ಜಾನುವಾರು ಗಣತಿ ನಡೆಯಲಿದೆ.

ದೇಶದ ಜಿಡಿಪಿಯಲ್ಲಿ ಶೇ 4.1ರಷ್ಟು ಜಾನುವಾರುಗಳ ಕೊಡುಗೆ ಇದೆ.

ಹಾಲು ಉತ್ಪಾದನೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಇದರ ಮಹತ್ವ ಅರಿತ ಕೇಂದ್ರ ಸರ್ಕಾರ ನಿಖರ ಗಣತಿಗೆ ಸುಧಾರಿತ ತಂತ್ರಜ್ಞಾನ ಬಳಸುತ್ತಿದೆ.

1919ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿಯಂತೆ ಈವರೆಗೆ 20 ಬಾರಿ ಗಣತಿ ನಡೆದಿದೆ. ಈ ಹಿಂದೆ ಪುಸ್ತಕದಲ್ಲಿ 200 ಕಾಲಂ ಭರ್ತಿ ಮಾಡಿದರೂ ನಿಖರ ದತ್ತಾಂಶಗಳು ಸಿಗುತ್ತಿರಲಿಲ್ಲ. ಜಾನುವಾರುಗಳ ಸಂಖ್ಯೆ ದಾಖಲೀಕರಣ ಕಷ್ಟವಾಗುತಿತ್ತು. ಈ ಎಲ್ಲಾ ಸವಾಲುಗಳನ್ನು ಹೊಸ ‘ಆಯಪ್’ ಸುಧಾರಿಸಿದೆ. ಜಾನುವಾರುಗಳ ಸಂಪೂರ್ಣ ವಿವರ 16 ಕಾಲಂಗಳಲ್ಲಿ ಭರ್ತಿ ಮಾಡಬಹುದು.

ಜಾನುವಾರು ತಳಿ, ಲಿಂಗ, ವಯಸ್ಸು, ಬಣ್ಣ, ಸದೃಢತೆ, ಫಲವತ್ತತೆ ದರ, ರೋಗ, ಔಷಧೋಪಚಾರ, ಲಸಿಕಾಕರಣ, ಮಾಲೀಕರು, ಅವರ ಜಾತಿ, ಜಾನುವಾರು ಸಾಕಣೆ ಮಾಡುವ ಮಹಿಳೆಯರ ಸಂಖ್ಯೆ ಸೇರಿ ಸಂಪೂರ್ಣ ವಿವರ ಇದರಲ್ಲಿ ದಾಖಲಿಸಬಹುದು. ಜಾನುವಾರು ಚಿತ್ರವನ್ನೂ ಅಪ್ಲೋಡ್‌ ಮಾಡಬಹುದು. ಇದರಿಂದ ಪುನರಾವರ್ತನೆ ಆಗುವ ಅಥವಾ ಗಣತಿಯಿಂದ ಹೊರಗುಳಿಯುವ ಸಾಧ್ಯತೆ ಇರುವುದಿಲ್ಲ.

ಸ್ಮಾರ್ಟ್‌ಫೋನ್‌ ಮೂಲಕ ಸುಧಾರಿತ ತಂತ್ರಜ್ಞಾನ ಬಳಸಿ ಮೊದಲ ಬಾರಿಗೆ ಗಣತಿ ನಡೆಯುತ್ತಿದೆ. ಗ್ರಾಮಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಸಾಮಾನ್ಯ. ಹೀಗಾಗಿ, ನೆಟ್‌ವರ್ಕ್‌ ಇಲ್ಲದಿದ್ದರೂ ಆಯಪ್‌ನಲ್ಲಿ ಮಾಹಿತಿ ಸಂಗ್ರಹಿಸಿ ಇಡುವಂತೆ ವಿನ್ಯಾಸಗೊಳಿಸಲಾಗಿದೆ. ನೆಟ್‌ವರ್ಕ್‌ ಬಂದ ನಂತರ ಅದನ್ನು ಸರ್ವರ್‌ಗೆ ಅಪ್ಲೋಡ್‌ ಮಾಡಬಹುದು.

‘ಸರ್ಕಾರ ಭವಿಷ್ಯದಲ್ಲಿ ಯೋಜನೆಗಳು, ನೀತಿ ರೂಪಿಸಲು ಈ ಗಣತಿ ಪ್ರಯೋಜನವಾಗಲಿದೆ. ರೈತರು, ಜಾನುವಾರು ಸಾಕಣೆದಾರರ ಸಮಸ್ಯೆ ನಿವಾರಣೆ, ಬೇರೆ ದೇಶ‌ಗಳ ಜೊತೆ ಹೋಲಿಕೆ, ರೋಗ ನಿಯಂತ್ರಣ, ಸಮುದಾಯದ ಅಭಿವೃದ್ಧಿ, ಅರ್ಥಿಕ ನೀತಿ ಸೇರಿ ಎಲ್ಲ ಹಂತಗಳಲ್ಲೂ ನೆರವಾಗಲಿದೆ. ದೇಶದ ಜಿಡಿಪಿಗೆ ಜಾನುವಾರುಗಳ ಕೊಡುಗೆ ಎಷ್ಟು ಎಂಬ ನಿಖರ ಮಾಹಿತಿ ಸಿಗಲಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೊಲೇರ ‘ತಿಳಿಸಿದರು.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ