ನವದೆಹಲಿ,ನ.7-ನಿರಂತರ ವೈಫಲ್ಯಕ್ಕೆ ಕಾರಣವಾಗಿರುವ ವಿರಾಟ್ ಕೊಹ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕತ್ವದಿಂದ ತೆಗೆದು ಹಾಕಬೇಕೆಂದು ಖ್ಯಾತ ಕ್ರಿಕೆಟ್ ತಾರೆ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ. ನೇರ ಮತ್ತು ನಿಷ್ಠೂರ ಮಾತುಗಳಿಗೆ ಹೆಸರಾಗಿರುವ ಮಾಜಿ ಆರಂಭಿಕ ಆಟಗಾರ ಮತ್ತು ಎರಡು ಬಾರಿ ಐಪಿಎಲ್ ಚಾಂಪಿಯನ್‍ಶಿಪ್ ಗೆದ್ದ ತಂಡದ ನಾಯಕತ್ವದ ವಹಿಸಿದ್ದ ಗೌತಮ್, ವಿರಾಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕ್ರೀಡಾ ವಾರ್ತಾ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ ಗೌತಮ್, ಇದು ವಿಶ್ವಾಸಾರ್ಹತೆ ಮತ್ತು ಉತ್ತರದಾಯಿತ್ವದ ಪ್ರಶ್ನೆ. ಹೀಗಾಗಿ ವಿರಾಟ್ ಕೊಹ್ಲಿ ಅವರನ್ನು ಆರ್‍ಸಿಬಿ ನಾಯಕತ್ವದಿಂದ ಕಿತ್ತೊಗೆಯಬೇಕೆಂದು ಹೇಳಿದರು. ಎಂಟು ವರ್ಷಗಳಿಂದ ಕೊಹ್ಲಿ ಆರ್‍ಸಿಬಿ ನಾಯಕತ್ವವನ್ನು ವಹಿಸಿದ್ದಾರೆ. ಆದರೂ ಒಂದೂ ಬಾರಿಯೂ ಟ್ರೋಫಿ ಗೆದ್ದಿಲ್ಲ.
ಐಪಿಎಲ್‍ನಲ್ಲಿ 8 ವರ್ಷ ಒಂದು ತಂಡದ ನಾಯಕರಾಗಿದ್ದರೂ ಒಂದೂ ಬಾರಿಯೂ ಕಪ್ ಗೆಲ್ಲದ ಏಕೈಕ ವ್ಯಕ್ತಿ ಎಂದರೆ ಅದು ವಿರಾಟ್ ಕೊಹ್ಲಿ ಎಂದು ಗೌತಮ್ ಗಂಭೀರ ಆರೋಪ ಮಾಡಿದರು. ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ತೆಗೆದು ಹಾಕಬೇಕೆಂದು ನೀವು ಭಾವಿಸುವಿರಾ ಎಂಬ ಪ್ರಶ್ನೆಗೆ, ಶೇ.100ರಷ್ಟು ಅವರನ್ನು ಆರ್‍ಸಿಬಿ ಕಾಪ್ಟನ್ಸಿಯಿಂದ ಕಿತ್ತೊಗೆಯಬೇಕು ಎಂದರು.
ಐಪಿಎಲ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಬೇಡಿ. ಏಕೆಂದರೆ ಅವರ ರೀತಿ ಕೊಹ್ಲಿ ಉತ್ತರದಾಯಿತ್ವವಾಗಿ ಆಟವಾಡಿಲ್ಲ. 8 ವರ್ಷಗಳಲ್ಲಿ ಇವರ ನಾಯಕತ್ವ ಅತ್ಯಂತ ಕಳಪೆ ಎಂದು ಗಂಭೀರ್ ವಾಗ್ದಾಳಿ ನಡೆಸಿದರು.