ಬೆಂಗಳೂರು: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರುತ್ತಿದೆ. ಇಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಕುಸುಮಾ ಹನುಮಂತರಾಯಪ್ಪ, ಬಿಜೆಪಿಯಿಂದ ಮುನಿರತ್ನ ಮತ್ತು ಜೆಡಿಎಸ್ ನಿಂದ ಕೃಷ್ಣಮೂರ್ತಿ ಬೈ ಎಲೆಕ್ಷನ್ ಅಖಾಡದಲ್ಲಿದ್ದು, ಆರ್.ಆರ್.ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.ನಾಮಪತ್ರ ಸಲ್ಲಿಕೆ ಹಿನ್ನೆಲೆ ರಾಜರಾಜೇಶ್ವರಿ ನಗರ ಜಂಟಿ ಆಯುಕ್ತರ ಕಚೇರಿಯ ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗಿತ್ತು. ಮಂಗಳವಾರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ ಬೆನ್ನಲ್ಲೇ ಪಕ್ಷ ಟಿಕೆಟ್ ಘೋಷಣೆ ಮಾಡಿತ್ತು. ಇಂದು ಅಪಾರ ಬೆಂಬಲಿಗರು ಮತ್ತು ಸಚಿವರ ಜೊತೆ ಆಗಮಿಸಿದ ಮುನಿರತ್ನ ಅವರು ನಾಮಪತ್ರ ಸಲ್ಲಿಸಿ,
ಎಲ್ಲ ಒಳ್ಳೇ ರೀತಿಯಲ್ಲಿ ನಡೆದಿದೆ. ನನ್ನ ಮೇಲಿರುವ ಕ್ಷೇತ್ರದ ಜನತೆಯ ಋಣವನ್ನ ತೀರಿಸುತ್ತೇನೆ ಎಂದರು. ಮುನಿರತ್ನ ಅವರಿಗೆ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಮತ್ತು ಸುಧಾಕರ್ ಸೇರಿದಂತೆ ಹಲವರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.
Laxmi News 24×7