ಉಡುಪಿ, ಜು.29: ಸುರತ್ಕಲ್ ನಲ್ಲಿ ಯುವಕನೋರ್ವನ ಕೊಲೆ ಯಾವ ಕಾರಣಕ್ಕೆ ಆಗಿದೆಯೆಂಬುದು ಗೊತ್ತಿಲ್ಲ. ಆದರೆ ಕ್ರಿಯೆಗೆ
ಪ್ರತಿಕ್ರಿಯೆ ಎಂಬಂತೆ ಕೊಲೆಗಳಾಗಬಾರದು. ಹಿಂದು ಮತ್ತು ಮುಸ್ಲಿಮ್ ಧಾರ್ಮಿಕ ಮುಖಂಡರು ಒಟ್ಟು ಸೇರಿ ಇಂತಹ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆಯ ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆ ಅತ್ಯಂತ ದುರದೃಷ್ಟಕರ. ಬಿಜೆಪಿಗರು ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೇ ಪ್ರವೀಣ್ ಹತ್ಯೆ ಆಗುತ್ತಿರಲಿಲ್ಲ ಎಂದರು.
ಪ್ರವೀಣ್ ಗೆ ಸ್ವಂತ ಮನೆ ಇಲ್ಲ. ನಾಯಕರು ಕಾರ್ಯಕರ್ತರ ಕಷ್ಟವನ್ನು ಅರಿತಿದ್ದರೇ ಪ್ರವೀಣ್ ಗೆ ಆಶ್ರಯ ಸಿಗುತ್ತಿತ್ತು. ಬಿಜೆಪಿಯ ಎಲ್ಲ ಮುಖಂಡರು 3-4 ಪೀಳಿಗೆ ಕೂತು ಉಣ್ಣುವಷ್ಟು ಮಾಡಿಟ್ಟಿದ್ದಾರೆ. ಈ ಕಾರಣಕ್ಕೆ ನಾನು ಬಿಜೆಪಿಗೆ ಧಿಕ್ಕಾರ ಎನ್ನುತ್ತಿದ್ದೇನೆ. ಈ ರೀತಿಯ ಆಕ್ರೋಶವೇ ಶವಯಾತ್ರೆಯ ದಿನ ಸ್ಫೋಟವಾಗಿದ್ದು ಎಂದರು.