ಕೋಲ್ಕತ್ತಾ: ಟೀಂ ಇಂಡಿಯಾ ವೇಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ರಕ್ಷಣೆ ಕಲ್ಪಿಸುವಂತೆ ಹೈಕೋರ್ಟಿಗೆ ಅಜಿ ಸಲ್ಲಿಸಿ ಮನವಿ ಮಾಡಿದ್ದಾರೆ.
ರಾಮ ಮಂದಿರ ಭೂಮಿ ಪೂಜೆ ಪೋಸ್ಟ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಸಿನ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಹಸೀನ್ ಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿ, ತನಗೆ ಹಾಗೂ ತನ್ನ ಮಗಳಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಂದರ್ಭದಲ್ಲಿ ಹಸಿನ್ ಶುಭಾಶಯ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ಅವರಿಗೆ ಹೆಚ್ಚಿನ ಬೆದರಿಕೆಗಳು ಬಂದಿದ್ದವು. ಕೆಲವರು ಹಸಿನ್ ವಿರುದ್ಧ ಅಸಹ್ಯಕರವಾಗಿ ದೂಷಿಸಿ, ಕೆಲವರು ರೇಪ್ ಮಾಡುವ ಬೆದರಿಕೆಯನ್ನು ಹಾಕಿದ್ದರು. ಈ ಕುರಿತು ಮಾತನಾಡಿರುವ ಹಸೀನ್, ಪೋಸ್ಟ್ ಮಾಡಿದ ಕೂಡಲೇ ಕೆಲವರು ಅಸಭ್ಯವಾಗಿ ನಿಂಧಿಸಿದ್ದರು. ನನಗೆ ಅಭದ್ರತೆಯ ಭಾವನೆ ಇದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತೇನೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಮಾನವೀಯತೆಯ ಆಧಾರದ ಮೇಲೆ ಪೊಲೀಸರು ಕ್ರಮಕೈಗೊಳ್ಳಬೇಕಿದೆ. ಆದರೆ ಅವರು ನನ್ನ ದೂರಿನ ಬಳಿಕವೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದಿದ್ದಾರೆ. 2014ರಲ್ಲಿ ಹಸಿನ್ ಜಹಾನ್, ಶಮಿ ಮದುವೆಯಾಗಿದ್ದರು. ಇಬ್ಬರೂ ಒಂದು ಹೆಣ್ಣು ಮಗು ಇದೆ. ನಾಲ್ಕು ವರ್ಷಗಳ ಕಾಲ ಸಂತಸದಿಂದ ಸಾಗಿದ್ದ ಇವರ ದಾಂಪತ್ಯ ಜೀವನ ಆ ಬಳಿಕ ಮುರಿದು ಬಿದ್ದಿತ್ತು. ಶಮಿ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಅಲ್ಲದೇ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಕೆಲ ದಿನಗಳ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಮಿ, ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೆ ಎಂದು ತಿಳಿಸಿದ್ದರು.
ಇತ್ತ ಐಪಿಎಲ್ 2020ರ ಟೂರ್ನಿಗಾಗಿ ಯುಎಇಗೆ ತೆರಳಿರುವ ಶಮಿ, ಪುತ್ರಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಕೊರೊನಾ, ಲಾಕ್‍ಡೌನ್ ಕಾರಣ ಪುತ್ರಿಯನ್ನು ಭೇಟಿಯಾಗಿಲ್ಲ. ಸದ್ಯ ಪುತ್ರಿ ಭೇಟಿ ಅಸಾಧ್ಯವಾಗಿದೆ. ಮಗಳನ್ನು ನೋಡದೆ ತುಂಬಾ ದಿನಗಳಾಗಿದೆ. ಪುತ್ರಿ ಈಗ ದೊಡ್ಡವಳಾಗಿದ್ದಾಳೆ. ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಶಮಿ ಹೇಳಿದ್ದು, ದುಬೈ ಪಿಚ್‍ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಶಮಿ ಹೇಳಿದ್ದಾರೆ.