ಗಂಗೊಳ್ಳಿ (ಉಡುಪಿ): ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅತ್ಯಂತ ಪರಿಣಾಮಕಾರಿ ಎನಿಸಿರುವ ‘ಲೈಪೊಸೊಮನ್ ಆಂಪೊಟೆರಿಸಿನ್ ಬಿ ಔಷಧವನ್ನು ಭಾರತ್ ಸೀರಮ್ಸ್ ಆಯಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪನಿ ಸಂಶೋಧಿಸಿದ್ದು, ಕರಾವಳಿ ಕನ್ನಡಿಗ ಬಾಂಡ್ಯ ಶ್ರೀಕಾಂತ ಪೈ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದರೆಂಬ ಹೆಮ್ಮೆಯ ವಿಚಾರ ಬೆಳಕಿಗೆ ಬಂದಿದೆ. ಶ್ರೀಕಾಂತ ಪೈ ನೇತೃತ್ವದ ತಂಡವು ವಿಭಿನ್ನ ಪರಿಣಾಮಕಾರಿತ್ವ, ಸುರಕ್ಷತೆ ಮತ್ತು ವಿಷತ್ವ ಪ್ರೊಫೈಲ್ಗಳನ್ನು ಹೊಂದಿರುವ 4 ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು, ಇದೀಗ ಈ ಉತ್ಪನ್ನಗಳೇ ಬ್ಲಾಯಕ್ ಫಂಗಸ್ ರೋಗಿಗಳಿಗೆ ವರದಾನ ವಾಗಿ ಪರಿಣಮಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿಯವರಾದ ಬಾಂಡ್ಯ ಶ್ರೀಕಾಂತ ಪೈ, ಬೆಂಗಳೂರಿನಲ್ಲಿ 1975ರಲ್ಲಿ ಬಿ.ಫಾರ್ಮ ಮತ್ತು ಮಣಿಪಾಲದಲ್ಲಿ 1977ರಲ್ಲಿ ಎಂ.ಫಾರ್ಮ ಶಿಕ್ಷಣ ಪಡೆದು, ಮುಂಬೈಯಲ್ಲಿರುವ ಭಾರತ್ ಸೀರಮ್ಸ್ ಆಂಡ್ ವ್ಯಾಕ್ಸಿನ್ಸ್ ಲಿ.ಕಂಪನಿ ಸೇರಿದ್ದರು. ವ್ಯಾಪಕ ಸಂಶೋಧನಾ ಕಾರ್ಯಗಳ ಭಾಗವಾಗಿ ಆಂಬಿಸೋಮ್ ಔಷಧದ ಸಾಮಾನ್ಯ ಆವೃತ್ತಿಯನ್ನು 2012ರಲ್ಲಿ ಶ್ರೀಕಾಂತ್ ಪೈ ಮತ್ತು ಅವರ ತಂಡ ಅಭಿವೃದ್ಧಿಪಡಿಸಿತ್ತು.
ಲೈಪೊಸೋಮಲ್ ಆಂಫೊಟೆರಿಸಿನ್ ಬಿ ಔಷಧದ ದಕ್ಷತೆ ಮತ್ತು ವಿಷತ್ವವನ್ನು ವ್ಯಾಪಕವಾಗಿ ಅಧ್ಯಯನ ಮಾಡಲಾಗಿದೆ ಮತ್ತು ಕಪ್ಪು ಶಿಲೀಂಧ್ರ ಸೋಂಕುಗಳಿಗೆ (ಬ್ಲ್ಯಾಕ್ ಫಂಗಸ್) ಚಿಕಿತ್ಸೆ ನೀಡಲು ವೈದ್ಯರು ಸೂಚಿಸುವ ಪ್ರಮುಖ ಉತ್ಪನ್ನವಾಗಿದೆ. ಈ ಉತ್ಪನ್ನದ ಬೆಲೆ 6000-7000 ರೂಪಾಯಿ. ಸಾಂಪ್ರದಾಯಿಕ ಉತ್ಪನ್ನಕ್ಕೆ ಹೋಲಿಸಿದರೆ ಪ್ರಾಣಿಗಳ ಮೇಲಿನ ಅಧ್ಯಯನದಲ್ಲಿ 20ಕ್ಕೂ ಹೆಚ್ಚು ಬಾರಿ ಸುರಕ್ಷತಾ ಪ್ರೊಫೈಲ್ ಹೊಂದಿರುವ ಆಂಫೊಟೆರಿಸಿನ್ ಬಿ ಲಿಪಿಡ್ ಕಾಂಪ್ಲೆಕ್ಸ್ (ಅಬೆಲ್ಸೆಟ್) ಎನ್ನುವ ಔಷಧವನ್ನು ಸಹ ಇದೇ ತಂಡ ಅಭಿವೃದ್ಧಿಪಡಿಸಿದೆ ಮತ್ತು ಸುಮಾರು 3000-3500 ರೂ. ವೆಚ್ಚದಲ್ಲಿ ಲಭ್ಯವಿದೆ.
ಆಂಫೊಟೆರಿಸಿನ್ ಬಿ ಎಮಲ್ಷನ್ ಎಂಬ ಔಷಧ ಅಗ್ಗದ ದರದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಇದಕ್ಕಾಗಿ ಪೇಟೆಂಟ್ ಪಡೆಯಲಾಗಿದೆ. ಸಾಂಪ್ರದಾಯಿಕ ಉತ್ಪನ್ನಕ್ಕೆ ಹೋಲಿಸಿದರೆ ಈ ಉತ್ಪನ್ನದ ಬೆಲೆ ಸುಮಾರು 2000 ರೂ. ಇದು 100 ಪಟ್ಟು ಸುರಕ್ಷತಾ ಪ್ರೊಫೈಲ್ ಹೊಂದಿದೆ. ನಿವೃತ್ತರಾದ ಬಳಿಕ ಬಿ.ಶ್ರೀಕಾಂತ ಪೈ ಸದ್ಯ ಮುಂಬೈನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಫಾಮುಲೇಶನ್ಸ್ನಲ್ಲಿ ಪೇಟೆಂಟ್ ಪಡೆದ 16 ಸಂಶೋಧನೆಗಳನ್ನು ನಡೆಸಿರುವ ಇವರು, ಈ ಕ್ಷೇತ್ರದಲ್ಲಿ 35 ವರ್ಷ ಅನುಭವ ಹೊಂದಿದ್ದಾರೆ.