ಗೋಕಾಕ: “ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಗೋಕಾಕ ಮತಕ್ಷೇತ್ರದಿಂದ. ಗೋಕಾಕ ಜನರೇ ನನ್ನ ರಾಜಕೀಯ ಏಳ್ಗೆಗೆ ಪ್ರಮುಖ ಕಾರಣ” ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.
ಗೋಕಾಕ ವಿಧಾನಸಭಾ ಮತಕ್ಷೇತ್ರದ ಮಮದಾಪುರ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ ಅವರು ಮಾತನಾಡಿದರು.
“ಕಳೆದ 30 ವರ್ಷಗಳಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ರಾಜಕೀಯ ಜೀವನ ಆರಂಭವಾಗಿದ್ದೆ ಗೋಕಾಕನಿಂದ. ಮಮದಾಪುರ ಗ್ರಾಮದ ಮುಖಂಡರು ಹಾಗೂ ಈ ಭಾಗದ ಅನೇಕರು ಸೇರಿ ಅಂದು ಸಂಘಟನೆ ಆರಂಭಿಸಿದ್ದೆವು. ಈಗಲೂ ನಾವು ಒಗ್ಗಟ್ಟಾಗಿದ್ದೇವೆ. ನೀವೆಲ್ಲರೂ ನಮ್ಮ ಗೆಲುವಿಗೆ ಕೈಜೋಡಿಸಲಿದ್ದೀರಿ ಎಂಬ ನಂಬಿಕೆ ಇದೆ” ಎಂದರು.
“ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತದಾರರು ಒಂದು ಬಾರಿ ಅವಕಾಶ ಮಾಡಿಕೊಡಬೇಕು” ಎಂದು ಅವರು ಮನವಿ ಮಾಡಿದರು.
“ಗೋಕಾಕ ಮತಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಲೋಚನೆಗಳು ನಮ್ಮಲ್ಲಿವೆ. ತಾವು ಅವಕಾಶ ಮಾಡಿಕೊಟ್ಟರೇ ನಮ್ಮ ಕಾರ್ಯವೈಖರಿ ನಿಮಗೆ ಗೊತ್ತಾಗಲಿದೆ” ಎಂದು ತಿಳಿಸಿದರು.
ಮಮದಾಪುರ ಗ್ರಾಮದ ಮುಖಂಡರು, ನೂರಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.