ಬೆಳಗಾವಿ: ಆರೆಸ್ಸೆಸ್ ರೀತಿ ಯಲ್ಲಿ ನಮ್ಮ ಶತ್ರುಗಳಿಗೂ ತರಬೇತಿ ನೀಡುವುದಿಲ್ಲ.
ಆರೆಸ್ಸೆಸ್‌ಗೂ ಕಾಂಗ್ರೆಸ್ ತರಬೇತಿ ಶಿಬಿರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರು ಸ್ಪಷ್ಟಪಡಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ರೀತಿಯ ಸಂಘಟನೆ ಕಾಂಗ್ರೆಸ್‌ಗೆ ಅಗತ್ಯವಿಲ್ಲ.
ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಘಟಪ್ರಭಾದಲ್ಲಿ ನಾ.ಸು. ಹರ್ಡೀಕರ ಸಮಾಧಿ ಸ್ಥಳದಲ್ಲಿ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿ ತರಬೇತಿ ನೀಡಲಾಗುವುದು. ಪಕ್ಷದ ಸಿದ್ಧಾಂತ ಹಾಗೂ ಇತಿಹಾಸ ಗಮನದಲ್ಲಿಟ್ಟುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯಕರ್ತರನ್ನು ತಯಾರು ಮಾಡಲಾಗುವುದು ಎಂದರು.
ಆರೆಸ್ಸೆಸ್ ನಮ್ಮಿಂದ ಸಾಕಷ್ಟು ಕಲಿಯಬೇಕಿದೆ. ಅದು ಸ್ವಾತಂತ್ರ್ಯ ಹೋರಾಟದ ವಿರುದ್ಧ ಕೆಲಸ ಮಾಡಿದೆ. ಆರೆಸ್ಸೆಸ್ ಯಾಕೆ ಲಾಠಿ ಹಿಡಿಯುತ್ತಿದೆ ಎನ್ನುವುದು ಜಗತ್ತಿಗೆ ಗೊತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಸೇವಾದಳ ಕೆಲಸ ಮಾಡಿದೆ. ಈಗ ಸೇವಾದಳದ ಮೂಲಕ ಕಾರ್ಯಕರ್ತರಿಗೆ ಬೌದ್ಧಿಕ ತರಬೇತಿ ಕೊಡುತ್ತೇವೆ ಎಂದರು. ಯಾವುದೇ ಕಾನೂನುಬಾಹಿರ ಕೆಲಸಗಳಲ್ಲಿ ಅಲ್ಪಸಂಖ್ಯಾಕರನ್ನು ಟಾರ್ಗೆಟ್ ಮಾಡುವುದು ಬಿಜೆಪಿಗೆ ಫ್ಯಾಷನ್ ಆಗಿದೆ ಎಂದರು.
ವೈಫಲ್ಯ ಮುಚ್ಚಲು ನಟಿಯರ ಹೆಸರು ಚಾಲ್ತಿ
ಕೇಂದ್ರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವೈಫಲ್ಯ ಮುಚ್ಚಿ ಹಾಕಲು ರಿಯಾ ಚಕ್ರವರ್ತಿ, ಕಂಗನಾ ಸುದ್ದಿ ಹೆಚ್ಚು ಚಾಲ್ತಿಯಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಂಜನಾ, ರಾಗಿಣಿ ಸುದ್ದಿ ಹರಿದಾಡುತ್ತಿದೆ. ಬಿಜೆಪಿ ಸರಕಾರ ಡ್ರಗ್ಸ್ ವಿಚಾರದಲ್ಲಿ ಕೇವಲ ಹೆಣ್ಮಕ್ಕಳ ಹೆಸರು ಹೇಳುತ್ತಿದೆ. ಹಾಗಾದರೆ ಯಾವ ಗಂಡಸೂ ಅಫೀಮು, ಗಾಂಜಾ ತೆಗೆದುಕೊಳ್ಳುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.