ಬೀದರ್/ಚಿತ್ರದುರ್ಗ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ. ಜೀವ ಉಳಿಸಿ ಅಂತ ಹೋದರೆ ಅದೊಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ.
ಹೌದು. ಆರೋಗ್ಯ ಸಚಿವ ಶ್ರೀರಾಮುಲುರ ತವರು ಜಿಲ್ಲೆ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದೆಡೆ ಖಾಲಿ ಖಾಲಿಯಾಗಿರುವ ಡಯಾಲಿಸಿಸ್ ವಾರ್ಡಿನ ಬೆಡ್‍ಗಳು, ಇನ್ನೊಂದೆಡೆ ಆಸ್ಪತ್ರೆ ಹೊರಗೆ ಡಯಾಲಿಸಿಸ್ ಚಿಕಿತ್ಸೆ ಸಿಗಲಾರದೇ ಕಂಗಾಲಾಗಿ ಕುಳಿತ ರೋಗಿಗಳು. ಕೊರೊನಾ ಮಧ್ಯೆ ಮುಖ್ಯವಾಗಿ ಸಿಗಬೇಕಿರುವ ಡಯಾಲಿಸಿಸ್ ಚಿಕಿತ್ಸೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.
ಕಳೆದ ಆರು ತಿಂಗಳಿಂದ ಜಿಲ್ಲಾಸ್ಪತ್ರೆಗೆ ಸರಿಯಾಗಿ ಡಯಾಲಿಸಿಸ್ ಮಾಡಿಸಲು ಅಗತ್ಯವಿರುವ ಮೆಡಿಸಿನ್ ರವಾನೆಯಾಗ್ತಿಲ್ಲ. ಒಂದು ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ಕೇವಲ ಎರಡು ದಿನ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ದಿಢೀರ್ ಅಂತ ಡಯಾಲಿಸಿಸ್ ಚಿಕಿತ್ಸೆ ನಿಲ್ಲಿಸಲಾಗಿದೆ. ಪರಿಣಾಮ ಕಿಡ್ನಿ ವೈಫಲ್ಯ ಹಾಗೂ ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜಿಲ್ಲೆಯ ರೋಗಿಗಳು ಪರದಾಡುವಂತಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ದಿಢೀರ್ ಅಂತ ಡಯಾಲಿಸಿಸ್ ನಿಲ್ಲಿಸಿರುವುದರ ಹಿಂದೆ ಸ್ಥಳೀಯ ಖಾಸಗಿ ಆಸ್ಪತ್ರೆಗಳ ಲಾಬಿ ಅಡಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾ ಸರ್ಜನ್ ಡಾ. ಬಸವರಾಜ್ ಅವರನ್ನ ಕೇಳಿದ್ರೆ, ನಮ್ಮಲ್ಲಿ ತಾತ್ಕಲಿಕವಾಗಿ ಇಲ್ಲಿಯತನಕ ಚಿಕಿತ್ಸೆ ನೀಡಿದ್ದು, ಈಗ ಸಮಸ್ಯೆ ಹೆಚ್ಚಾಗಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇವೆ ಅಂತ ಸಲೀಸಾಗಿ ಹೇಳುತ್ತಾರೆ. ಒಟ್ಟಿನಲ್ಲಿ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲೇ ಡಯಾಲಿಸಿಸ್ ಚಿಕಿತ್ಸೆ ಸಿಕ್ತಿಲ್ಲ ಅಂದ್ರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ಪಾಡಿದೆ ಅನ್ನೋದು ಗೊತ್ತಾಗುತ್ತೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕಿದೆ.
ಬ್ರೀಮ್ಸ್ ಆಸ್ಪತ್ರೆ ಮುಂದೆ ರೋಗಿ ನರಳಾಟ:
ಚಿತ್ರದುರ್ಗದ ಜಿಲ್ಲಾಸ್ಪತ್ರೆ ಪರಿಸ್ಥಿತಿ ಒಂದ್ಕಡೆಯಾದ್ರೆ ಬೀದರ್‍ನ ಬ್ರೀಮ್ಸ್ ಮತ್ತೊಂದು ಎಡವಟ್ಟು ಮಾಡಿದೆ. ಆಸ್ಪತ್ರೆ ಮುಂದೆ ರೋಗಿ ನರಳಾಡಿದರೂ ಸಿಬ್ಬಂದಿ ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ. ಒಂದಿಲ್ಲೊಂದು ಎಡವಟ್ಟುಗಳಿಂದ ಸದಾ ಸುದ್ದಿಯಲ್ಲಿರುವ ಬ್ರೀಮ್ಸ್ ಕೊರೊನಾ ಮಧ್ಯೆ ಕೆಂಗಣ್ಣಿಗೆ ಗುರಿಯಾಗಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನಿಗೆ ಚಿಕಿತ್ಸೆ ನೀಡದೆ ಬ್ರೀಮ್ಸ್ ಸಿಬ್ಬಂದಿ ಕಾಯಿಸಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಚೀಟಿ ಬೇಕೆಂದು ಆಸ್ಪತ್ರೆಯ ಹೊರಗೆ 15 ನಿಮಿಷಗಳ ಕಾಲ ಕಾಯಿಸಿ ನಿರ್ಲಕ್ಷ್ಯ ತೋರಿದ್ದಾರೆ. ಬ್ರೀಮ್ಸ್ ಸಿಬ್ಬಂದಿ ಇಲ್ಲದ ಕಾರಣ ರೋಗಿಯ ತಂದೆಯೇ ಗ್ಲೂಕೋಸ್ ಬಾಟಲ್ ಹಿಡಿದು ವ್ಹೀಲ್‍ಚೇರ್ ತಳ್ಳಿಕೊಂಡು ಹೋಗಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಮಧ್ಯೆ ಸಾಮಾನ್ಯ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಕ್ತಿಲ್ಲ. ಸರ್ಕಾರದ ಕೆಲ ರೂಲ್ಸ್‍ಗಳನ್ನೇ ಮೀರಿ ಅಲ್ಲಿನ ಸಿಬ್ಬಂದಿ ವರ್ತಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಮುಚ್ಚಿ ಕುಳಿತಿರುವುದು ವಿಪರ್ಯಾಸ.
ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??