ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಶೇ.10ರಿಂದ 15ರಷ್ಟು ಜನರಲ್ಲಿ ಕೊರೋನಾ ಸೋಂಕು ಇದೆ. ಜಿಲ್ಲಾಡಳಿತ ಇದನ್ನು ಮುಚ್ಚಿಡುತ್ತಿದೆ. ಸರಿಯಾಗಿ ಟೆಸ್ಟ್ ಮಾಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಪಿ.ವಿ.ಮೋಹನ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯದಿಂದ ಬರುವವರನ್ನು ಸರಿಯಾಗಿ ಚೆಕ್ ಮಾಡುತ್ತಿಲ್ಲ, ಕ್ವಾರಂಟೈನ್ ಮಾಡುತ್ತಿಲ್ಲ. ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಸೋಂಕು ಹರಡುತ್ತಿದೆ. ಸರಿಯಾಗಿ ಚೆಕ್ ಮಾಡಿದರೆ ಶೇ.10ರಿಂದ 15ರಷ್ಟು ಜನರಿಗೆ ಸೋಂಕು ಪತ್ತೆಯಾಗಲಿದೆ ಎಂದರು. (ಬೆಳಗಾವಿ ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ. 15ರಷ್ಟು ಅಂದರೆ 7.5 ಲಕ್ಷ ).
ಬೆಳಗಾವಿಯಲ್ಲಿ ಸಾಮಾಜಿಕ ಅಂತರ ಕಾಣುತ್ತಿಲ್ಲ. ಮಾಸ್ಕ್ ಕಾಣುತ್ತಿಲ್ಲ. ಇಲ್ಲಿ ಒಬ್ಬರು ಕೇಂದ್ರ ಸಚಿವರು, ಮೂವರು ರಾಜ್ಯದ ಸಚಿವರು, ಒಬ್ಬ ಉಪಮುಖ್ಯಮಂತ್ರಿ, ಒಬ್ಬರು ಸಚೇತಕರು ಎಲ್ಲರೂ ಇದ್ದಾರೆ. ಆದರೆ ಜನರ ಬಗ್ಗೆ ಯಾರೊಬ್ಬರಿಗೂ ಕಾಳಜಿ ಇಲ್ಲ ಎಂದೂ ಅವರು ಹೇಳಿದರು.
ರಾಜ್ಯದ ಬಿಜೆಪಿ ಸರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಸಲು ಅನುಮತಿ ನೀಡುತ್ತಿಲ್ಲ. ಈ ಬಾರಿ ಅನುಮತಿ ನೀಡದಿದ್ದರೂ ಕಾರ್ಯಕ್ರಮ ನಡೆಸಲಾಗುವುದು ಎಂದೂ ಅವರು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವುದರ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ. ಖರ್ಗೆ ರಾಜ್ಯಸಭೆ ಪ್ರವೇಶಿಸಿದರೆ ನರೇಂದ್ರ ಮೋದಿಯವರಿಗೆ ಸುಲಭವಾಗಿ ಆಡಳಿತ ನಡೆಸಲು ಬಿಡುವುದಿಲ್ಲ. ಹಾಗಾಗಿ ಆ ಭಯದಿಂದ ಖರ್ಗೆ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದೂ ಅವರು ಹೇಳಿದರು.
ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಅಧ್ಯಕ್ಷ ರಾಜು ಸೇಠ್, ಜಯಶ್ರೀ ಮಾಳಗಿ, ಸುನೀಲ ಹನುಮಣ್ಣವರ್ ಮೊದಲಾದವರು ಇದ್ದರು.