ರಾಯಬಾಗ: ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿ ಕಿರುಕುಳದ ಆರೋಪ ಹೊರಿಸಿ ಸಹ ಶಿಕ್ಷಕಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಇಲ್ಲಿನ ರೈಲು ನಿಲ್ದಾಣದ ಬಳಿ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನ್ನಪೂರ್ಣಾ ರಾಜು ಬಸಾಪುರೆ (55) ಆತ್ಮಹತ್ಯೆಗೆ ಶರಣಾದವರು. ಅವರು ತಾಲೂಕಿನ ಕುಡಚಿ ನಿವಾಸಿಯಾಗಿದ್ದು, ಖಾಸಗಿ ಅನುದಾನಿತ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈ ಶಿಕ್ಷಣ ಮುಖ್ಯಶಿಕ್ಷಕ ಜಮಾದಾರ ಹಾಗೂ ಸಹ ಶಿಕ್ಷಕಿ ಮಯೂರಿ ಹಾಗೂ ಉಮಾ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಯಬಾಗ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಪ್ರತಿಭಟನೆ: ಈ ಬಗ್ಗೆ ತನಿಖೆ ಕೈಗೊಂಡು ಸಹ ಶಿಕ್ಷಕಿ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಲೆಯ ಎದುರು ಶವವಿಟ್ಟು ಸ್ಥಳೀಯರು ಹಾಗೂ ಮೃತ ಶಿಕ್ಷಕಿಯ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು. ಪೊಲೀಸರು ಹಾಗೂ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಕುರಿತು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
Laxmi News 24×7