ಚಿಕ್ಕಮಗಳೂರು, ನ.7- ಚೆಕ್‍ಬೌನ್ಸ್ ಪ್ರಕರಣದಲ್ಲಿ ಕಾಫಿ ಡೇಯ ನಿರ್ದೇಶಕರಾಗಿರುವ ಮಾಳವಿಕಾ ಹೆಗ್ಡೆ ಅವರಿಗೆ ಮೂಡಿಗೆರೆಯ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು ನೀಡಿದೆ. ಕಾಫಿ ಡೇ ಮೂಡಿಗೆರೆ ಹಾಗೂ ಸುತ್ತಮುತ್ತಲ ಹಲವಾರು ಬೆಳೆಗಾರರಿಂದ ಕಾಫಿ ಖರೀದಿ ಮಾಡಿತ್ತು. ಅವರ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಗ್ರಾಮದ ಶಿವಪ್ರಕಾಶ್ ಎಸ್ಟೇಟ್ ಮಾಲೀಕ ಕೆ.ನಂದೀಶ್ ಅವರು ಬಾಕಿ ಹಣಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕಾಫಿ ಮಾರಾಟ ಮಾಡಿದ್ದ ಬಾಪ್ತು 45 ಲಕ್ಷದ ಪೈಕಿ 4 ಲಕ್ಷ ರೂ.ಗಳನ್ನು ಮಾತ್ರ ಪಾವತಿ ಮಾಡಿದೆ. ಬಾಕಿ ಹಣಕ್ಕಾಗಿ ಕಂಪೆನಿ ಚೆಕ್ ಕೊಟ್ಟಿದ್ದು, ಅವು ಬೌನ್ಸ್ ಆಗಿವೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯ ಎಬಿಸಿ ಸಂಸ್ಥೆ ನಿರ್ದೇಶಕಿ ಹಾಗೂ ಸಿದ್ದಾರ್ಥ ಹೆಗ್ಡೆ ಅವರ ಪತ್ನಿ ಮಾಳವಿಕಾ ಹೆಗ್ಡೆ,
ಸಂಸ್ಥೆಯ ಇತರೆ ನಿರ್ದೇಶಕರಾದ ಜೈರಾಜ್ ಸಿ.ಹುಬ್ಳಿ, ಕಾರ್ಯದರ್ಶಿ ಸದಾನಂದಪೂಜಾರಿ, ಕಂಪೆನಿ ಮುಖ್ಯಸ್ಥರಾದ ನಿತಿನ್ ಬಾಗಮನಿ, ಕಿಟಿಪಿ ಸಾವಂತ್, ಜಾವೆದ್ ಫರ್ವೆಜ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.
ಈ ಸಂಬಂಧ ಮಾಳವಿಕಾ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಜಾಮೀನು ನೀಡಿದೆ.
Laxmi News 24×7