ಹುಬ್ಬಳ್ಳಿ : ದೇವನಹಳ್ಳಿ ಬಳಿ ಚನ್ನರಾಯಪಟ್ಟಣ ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಉದ್ದೇಶಿತ ಏರೊಸ್ಪೇಸ್ ಪಾರ್ಕ್ ಅನ್ನು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂಬ ಕೂಗು ಜೋರಾಗಿ ಕೇಳಿ ಬಂದಿದೆ.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಏರೋಸ್ಪೇಸ್ ಪಾರ್ಕ್ನ್ನು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡದಲ್ಲಿ ಆರಂಭಿಸುವುದರಿಂದ ಕರ್ನಾಟಕದ ಉತ್ತರ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ. ಇದರಿಂದ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಗಳು ದೊರೆತು ವಿಶೇಷವಾಗಿ ಇಂಜಿನಿಯರಿಂಗ್ ತಾಂತ್ರಿಕ ಕ್ಷೇತ್ರಗಳಲ್ಲಿಯೂ ಅವಕಾಶಗಳು ಹೆಚ್ಚಲಿವೆ.
ಪಾರ್ಕ್ ಸುತ್ತಲಿನ ಪ್ರದೇಶದಲ್ಲಿ ವಸತಿ, ಮಾಲ್, ಹೋಟೆಲ್, ಗೋದಾಮು, ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಅಭಿವೃದ್ಧಿ ಆಗುವುದರ ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಅವಕಾಶ ದೊರೆಯಲಿದೆ.
ಏರೊಸ್ಪೇಸ್ ಪಾರ್ಕ್‌ನ ಮೂಲಕ ಅಂತಾರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರುತ್ತವೆ. ಬೆಂಗಳೂರು ಕೇಂದ್ರಿತ ಕೈಗಾರಿಕೆ ವಿಸ್ತರಣೆ ಬದಲು ಉತ್ತರ ಕರ್ನಾಟಕದ ಕಡೆ ಗಮನಹರಿಸಿ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ ಮುಂತಾದ ನಗರಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಬೇಕು ಎಂದು ಕೆಸಿಸಿಐ ಸರ್ಕಾರಕ್ಕೆ ಪತ್ರ ಬರೆದಿದೆ.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸಿಎಂಗೆ ಪತ್ರ ಬರೆದಿರುವುದು (ETV Bharat)
ಸ್ವದೇಶಿ ಯುದ್ಧ ವಿಮಾನ ಭಾಗಗಳ ತಯಾರಿಕೆ, ತಂತ್ರಜ್ಞಾನ ಸಂಶೋಧನೆಗೆ ನೆರವು ದೊರೆತು ಆತ್ಮನಿರ್ಭರ ಭಾರತ ಕಾರ್ಯಕ್ರಮಕ್ಕೆ ಪೂರಕವಾಗಲಿದೆ. ಅಲ್ಲದೆ, ಪ್ರಾದೇಶಿಕ ಅಸಮತೋಲನ ನಿವಾರಣೆ, ಉದ್ಯೋಗಾವಕಾಶ, ಶಿಕ್ಷಣ ಮಟ್ಟದ ಏರಿಕೆಗೂ ಸಹ ಕಾರಣವಾಗಿ ಒಟ್ಟಾರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬುನಾದಿಯಾಗಲಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಭೂ ಬ್ಯಾಂಕ್, ಸರ್ಕಾರಿ ಭೂಮಿ ಇದೆ. ಬೇಲೂರು ಕೈಗಾರಿಕಾ ವಲಯದಲ್ಲಿ ಏರೋಸ್ಪೇಸ್ ಸ್ಥಾಪನೆಗೆ ಅನುಕೂಲಕರ ವಾತಾವರಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ. ಈ ಭಾಗದ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನ ಮಾಡಬೇಕೆಂದು ಎಂದು ಒತ್ತಾಯಿಸಲಾಗಿದೆ.
ಈ ಕುರಿತಂತೆ ಕೆಸಿಸಿಐ ಪ್ರಧಾನ ಕಾರ್ಯದರ್ಶಿ ರವೀಂದ್ರ ಬಳಿಗಾರ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ‘ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟಿದ್ದರಿಂದ ಹುಬ್ಬಳ್ಳಿಗೆ ಮಂಜೂರು ಮಾಡಬೇಕು ಎಂದು ಮುಖ್ಯಮಂತ್ರಿ, ಕೈಗಾರಿಕೆ ಸಚಿವರು ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ರೆ ಹುಬ್ಬಳ್ಳಿ ಬೇಲೂರು ಇಂಡಸ್ಟ್ರಿಯಲ್ ಏರಿಯಾಗೆ ಕೊಡಬೇಕು. ಇದರಿಂದ ಇತರೆ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಟಾಟಾ ಮಾರ್ಕೋಪೋಲ್ ಪಕ್ಕದಲ್ಲಿ 1800-2000 ಎಕರೆ ಜಮೀನು ಇದೆ. ಟಾಟಾ ಕಂಪನಿಗೂ ಹೆಚ್ಚುವರಿ ಜಾಗ ಇರುವುದರಿಂದ ಜಾಗ ಕೊಡುವವರಿದ್ದಾರೆ. ಇದರಿಂದ ಉತ್ತರ ಕರ್ನಾಟಕ ಭಾಗ ಬೆಳೆಯುತ್ತದೆ. ಕೇವಲ ಬೆಂಗಳೂರು, ತುಮಕೂರು, ರಾಮನಗರ ಅಭಿವೃದ್ಧಿ ಮಾಡಿದ್ರೆ ಉತ್ತರ ಕರ್ನಾಟಕ ಬೆಳೆಯುವುದು ಯಾವಾಗ? ಎಂದು ಪ್ರಶ್ನಿಸಿದರು. ಹೀಗಾಗಿ, ಹುಬ್ಬಳ್ಳಿಯಲ್ಲಿ ಏರೋ ಸ್ಪೇಸ್ ಪಾರ್ಕ್ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
ಕೆಸಿಸಿಐ ಜಂಟಿ ಕಾರ್ಯದರ್ಶಿ ಮಹೇಂದ್ರ ಸಿಂಘಿ ಮಾತನಾಡಿ, ‘ರಾಜ್ಯ ಸರ್ಕಾರ ಬಿಯಾಂಡ್ ಬೆಂಗಳೂರು ಅಂತ ಹೇಳುತ್ತ ಬಂದಿದೆ. ಆದ್ರೆ ಈಗ ಉತ್ತರ ಕರ್ನಾಟಕ ಭಾಗದ ಯುವಕರು ಉದ್ಯೋಗವಕಾಶಕ್ಕಾಗಿ ಬೆಂಗಳೂರು, ಮೈಸೂರು ಕಡೆ ಹೋಗುತ್ತಾರೆ. ಆದ್ರೆ ಏರೋಸ್ಪೇಸ್ ಸ್ಥಾಪನೆ ಮಾಡಿದ್ರೆ ಹೆಚ್ಚಿನ ಅನುಕೂಲವಾಗಲಿದೆ’ ಎಂದಿದ್ದಾರೆ.