ಹುಬ್ಬಳ್ಳಿ-ಧಾರವಾಡ ಅವಳಿನಗರದ ಸ್ವಚ್ಛತೆ, ಘನತ್ಯಾಜ್ಯ ಸಮರ್ಪಕ ನಿರ್ವಹಣೆಗೆ 63 ಸಮುದಾಯ ನಿರ್ವಾಹಕರ ನೇಮಕ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸ್ವಚ್ಛತೆ ಹಾಗೂ ಕಸದ ನಿರ್ವಹಣೆ ದೊಡ್ಡ ಸವಾಲಾಗಿದೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆ ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಘನತ್ಯಾಜ್ಯ ನಿರ್ವಹಣೆಗೆ 63 ಸಮುದಾಯ ನಿರ್ವಾಹಕರನ್ನು (ಕಮ್ಯುನಿಟಿ ಮೊಬೈಲೈಸರ್) ನೇಮಕ ಮಾಡಿಕೊಂಡಿದೆ.
ಈ ಸಮುದಾಯ ನಿರ್ವಾಹಕರು ಜುಲೈ 15 ರಿಂದ ಕಾರ್ಯಾರಂಭ ಮಾಡಲಿದ್ದಾರೆ. ಸ್ವಚ್ಛ ಭಾರತ ಮಿಷನ್ -2 ಅಡಿ ಮನೆಮನೆಗೆ ಕಸ ಸಂಗ್ರಹ ಕುರಿತು ಜಾಗೃತಿ ಮೂಡಿಸಲು 15 ಸಾವಿರ ಜನರಿಗೆ ಒಬ್ಬರಂತೆ ಈ 63 ಸಮುದಾಯ ನಿರ್ವಾಹಕರು ಕೆಲಸ ನಿರ್ವಹಿಸಲಿದ್ದಾರೆ. ಇವರನ್ನು ಪಾಲಿಕೆ ಆಯುಕ್ತರು, ಅಧೀಕ್ಷಕರು, ಘನತ್ಯಾಜ್ಯ ನಿರ್ವಹಣಾ ಅಧಿಕಾರಿ ಆಯ್ಕೆ ಮಾಡಿದ್ದಾರೆ.ಎಸ್ಸೆಸ್ಸೆಲ್ಸಿ ಪಾಸಾದ, ಕಂಪ್ಯೂಟರ್ ಸಾಮಾನ್ಯ ಜ್ಞಾನ, ಸಂವಹನ ಕೌಶಲ್ಯವುಳ್ಳವರನ್ನು ಸಮುದಾಯ ನಿರ್ವಾಹಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ಪ್ರತಿ ತಿಂಗಳಿಗೆ 18,780 ರೂ. ಗೌರವಧನ ನೀಡಲಾಗುತ್ತಿದೆ. ಮೂರು ವರ್ಷದ ಅವಧಿ ಇರುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ 4.26 ಕೋಟಿ ರೂ. ಅನುದಾನ ನೀಡಲಿದೆ.ಈ ಕುರಿತಂತೆ ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್ ಸಂತೋಷ್ ಯರಂಗಳ್ಳಿ
“ಕಸ ಬೇರ್ಪಡಿಸುವಿಕೆ, ಹಸಿ ಮತ್ತು ಒಣ ಕಸ ಬೇರ್ಪಡಿಸುವುದರ ಜೊತೆಗೆ ಜನರಿಗೆ ತಿಳುವಳಿಕೆ ಹೇಳಲು ಈ ಕಮ್ಯುನಿಟಿ ಮೊಬೈಲೈಸರ್ಗಳು ಕೆಲಸ ಮಾಡುತ್ತಾರೆ. 15 ಸಾವಿರ ಜನಸಂಖ್ಯೆಗೆ ಒಬ್ಬರಂತೆ 63 ಜನರನ್ನು ನೇಮಕ ಮಾಡಲಾಗಿದೆ. ಸಮುದಾಯ ನಿರ್ವಾಹಕರು ನಿತ್ಯವೂ ಬೆಳಗ್ಗೆ 6ಕ್ಕೆ ಅವರಿಗೆ ನಿಗದಿ ಮಾಡಿದ ಪ್ರದೇಶದಲ್ಲಿ ಹಾಜರಿರಬೇಕು. ಅವರು ಪಾಲಿಕೆ ಆರೋಗ್ಯ ನಿರೀಕ್ಷರ ಅಡಿ ಕಸ ಸಂಗ್ರಹಣೆ ಮಾಡುವ ಪೌರ ಕಾರ್ಮಿಕರಿಗೆ ಸಲಹೆಗಳನ್ನು ನೀಡುವುದು, ಕಸ ವಿಂಗಡಣೆ, ಎಲ್ಲೆಂದರಲ್ಲಿ ಕಸ ಚೆಲ್ಲುವವರನ್ನು ಗುರುತಿಸಿ ತಡೆಯುವುದು ಹಾಗೂ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.