ರಾಯಬಾಗ: ಜಾತಿಯ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರಿ, ಸರ್ವಧರ್ಮಗಳ ಭಾವೈಕ್ಯದ ಕೊಂಡಿಯಾಗಿರುವ ಮೊಹರಂ ಹಬ್ಬ ಆಚರಣೆ ಆಧುನಿಕ ಯುಗದಲ್ಲೂ ಸ್ನೇಹ, ಭ್ರಾತೃತ್ವದ ಸಂಕೇತವಾಗಿ ನಡೆದುಕೊಂಡು ಬಂದಿದೆ. ಮೊರಬದಲ್ಲಿ ಮೊಹರಂ ಸರ್ವ ಧರ್ಮೀಯರು ಆಚರಿಸುವ ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ.
ಇದಕ್ಕೆ ಅಲಾಯಿ ಹಬ್ಬ ಅಂತಲೂ ಹೆಸರು. ಮೊರಬ ಗ್ರಾಮದಲ್ಲಿ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಚಿಣ್ಣರನ್ನು ನೋಡುವುದೇ ಒಂದು ಮಜವಾಗಿರುತ್ತದೆ. ಐದು ದಿನಗಳ ಕಾಲ ಕೂರಿಸಲಾಗುವ ಅಲಾಯಿ (ಪಂಜಾ) ದೇವರಿಗೆ ಕುಣಿ ತೆಗೆದು ಅಗ್ನಿಕುಂಡ ಪ್ರವೇಶ ಮಾಡುತ್ತಾರೆ. ಇನ್ನೊಂದೆಡೆ ಮೊಹರಂ ದಿನ ಮಾದಿಲಿ, ಸಕ್ಕರೆ, ಕಾರಿಕು, ಕೊಬ್ಬರಿ ಹಾಗೂ ಮಾಂಸವನ್ನು ನೈವೇದ್ಯವನ್ನಾಗಿ ಭಕ್ತರು ಅರ್ಪಿಸುತ್ತಾರೆ.
ಮೊರಬ ಗ್ರಾಮದ ಮೊಹರಂ ನೋಡಲು ಹತ್ತಿರದ ಹಳ್ಳಿಗಳಿಂದ ನಮ್ಮ ರಾಜ್ಯದಿಂದ ಹಾಗೂ ನೆರೆ ರಾಜ್ಯದ ಕೊಲ್ಹಾಪುರ, ಸಾಂಗ್ಲಿ, ಮುಂಬಯಿ ಪಟ್ಟಣಗಳಿಂದ ಬಂದ ಜನ ದೇವರ ಆಶೀರ್ವಾದ ಪಡೆದು ಕಾಣಿಕೆ ಸಲ್ಲಿಸುತ್ತಾರೆ.
ಬಾವಾ, ಫಕೀರರಾಗಿ ಸೇವೆ:
ಮೊರಬ ಗ್ರಾಮದ ಸಾವಿರಾರು ಮಕ್ಕಳು, ಯುವಕರು, ಪುರುಷರು ಸೇರಿ ಐದು ದಿನಗಳ ಕಾಲ ಲಾಲಸಾಬ್ ದೇವರ ಮುಂದೆ ಗೆಜ್ಜೆ ಕಟ್ಟಿಕೊಂಡು ನಾದಕ್ಕನುಸಾರವಾಗಿ ಹೆಜ್ಜೆ ಹಾಕುತ್ತಾರೆ. ಅಲ್ಲದೇ ಹೊಂಡದ ಕೆಸರಿನಲ್ಲಿ ಮಿಂದೆದ್ದು ಸಂತಸ ಹಂಚಿಕೊಳ್ಳುತ್ತಾರೆ. ಇವರು ದೇವರಿಗೆ ಹರಕೆ ತೀರಿಸಲೆಂದು ಬಾವಾ, ಫಕೀರರಾಗಿ ಕೈಯಲ್ಲಿ, ಕೊರಳಲ್ಲಿ ವಿವಿಧ ಬಗೆಯ ಬಣ್ಣದ ಲಾಡಿಗಳನ್ನು ಕಟ್ಟಿಕೊಳ್ಳುತ್ತಾರೆ.