ಉಡುಪಿ: ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ಕಡ್ಡಾಯ ಎಂದು ಸೋಮವಾರವಷ್ಟೇ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಆರೋಗ್ಯ ಸಚಿವ ಶ್ರೀರಾಮುಲು ಅವರು ಇನ್ನು ಮುಂದೆ ಸರ್ಕಾರಿ ಕ್ವಾರಂಟೈನ್ ಇರಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಜನ ಆರೋಗ್ಯ ಇಲಾಖೆಯನ್ನು ನಂಬಬೇಕಾ ಅಥವಾ ಆರೋಗ್ಯ ಸಚಿವರನ್ನು ನಂಬಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ಹೌದು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ. ವ್ಯಕ್ತಿಯ ಮನೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡುತ್ತೇವೆ. ಸೀಲ್ ಮಾಡಿದ ಮೇಲೆ ಆತ ಮನೆಯಲ್ಲೇ ಇರಬೇಕು. ಹೊರಬಂದ್ರೆ ಕೇಸ್ ಹಾಕುವ ತೀರ್ಮಾನ ಮಾಡಿದ್ದೇವೆ. ಈ ತೀರ್ಮಾನವನ್ನು ರಾಜ್ಯ ಮಟ್ಟದಲ್ಲೇ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗೆ ಜಿಲ್ಲೆಯ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಸೀಲ್ ಡೌನ್ ಇದ್ದವರು ಹೊರಗೆ ಬಂದ್ರೆ ಕೇಸ್ ಬೀಳುತ್ತೆ. ಪೊಲೀಸ್, ಹೋಂ ಗಾರ್ಡ್ ಗಳನ್ನು ನೇಮಿಸುತ್ತೇವೆ. ಆಶಾ, ಅಂಗನವಾಡಿ ಕಾರ್ಯಕರ್ತರು ನಿಗಾ ಇಡುತ್ತಾರೆ. ಹೊರಬಂದ್ರೆ ಸುತ್ತಮುತ್ತಲ ಮನೆಯವರು ಮಾಹಿತಿ ಕೊಡಬೇಕು. ತುಂಬಾ ಬಡವರಿದ್ದರೆ ಆ ಮನೆಗೆ ದೇವಸ್ಥಾನದ ಮೂಲಕ ಕಿಟ್ ಒದಗಿಸಲಾಗುವುದು. ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಪಾರ್ಟ್ ಮೆಂಟ್ ಸೀಲ್ ಮಾಡಲ್ಲ. ಒಂದು ಮನೆಯನ್ನು ಮಾತ್ರ ಸೀಲ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಸ್ಫೋಟವಾಗಿದ್ರೂ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಿ ಹೋಂ ಕ್ವಾರಂಟೈನ್ ಮಾಡುವ ನಿರ್ಧಾರವನ್ನು ಸಚಿವರು ಪ್ರಕಟಿಸಿದ್ದರು. ಸರ್ಕಾರದ ಈ ನಡೆ ವಿರೋಧಿಸಿ ಪಬ್ಲಿಕ್ ಟಿವಿ ನಿರಂತರ ಸುದ್ದಿ ಪ್ರಸಾರ ಮಾಡಿತ್ತು. ಕೊನೆಗೂ ಪಬ್ಲಿಕ್ ಆಗ್ರಹಕ್ಕೆ ಮಣಿದು ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಬದಲು 7 ದಿನ ಸಾಂಸ್ಥಿಕ ಕ್ವಾರಂಟೈನ್ ನಿರ್ಧಾರ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಇಲ್ಲ. ಬದಲಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.