ಮಡಿಕೇರಿ: ನಿವೃತ್ತಿ ಹೊಂದಿದ 24 ದಿನದಲ್ಲೇ ಎಎಸ್‍ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಮಾದೇಗೋಡು ಗ್ರಾಮದಲ್ಲಿ ನಡೆದಿದೆ.
ಎಂ.ಎಸ್.ಈರಪ್ಪ ಮೃತ ಸಹಾಯಕ ಸಬ್ ಇನ್ಸ್‌ಪೆಕ್ಟರ್. ಈರಪ್ಪ ಕಳೆದ ಒಂದು ವರ್ಷದಿಂದ ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೇ 30 ರಂದು ನಿವೃತ್ತಿ ಹೊಂದಿದ್ದರು.
ಇಂದು ಬೆಳಗ್ಗೆ ಈರಪ್ಪ ತಮ್ಮ ಮನೆಯಲ್ಲೇ ಒಂಟಿ ನಳಿಕೆಯ ಬಂದೂಕು ಬಳಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಈರಪ್ಪ ಪತ್ನಿ, ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಶನಿವಾರಸಂತೆ ಪೋಲಿಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.