ನವದೆಹಲಿ: ನನ್ನ ರಾಜ್ಯದಲ್ಲಿ ಹಿಂಸೆ ನಡೆಯುತ್ತಿದೆ. ಆದರೆ ಆ ಬಗ್ಗೆ ನಾನೇನೂ ಮಾತನಾಡಲು ಆಗುತ್ತಿಲ್ಲ. ಒಂಥರಾ ಉಸಿರು ಕಟ್ಟಿಸೋ ವಾತಾವರಣ ಇದೆ ಎಂದಿರುವ ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ಅವರು ಸದ್ಯದಲ್ಲೇ ಪಕ್ಷ ತೊರೆದು ಮತ್ತೊಂದು ಪಕ್ಷ ಸೇರುವ ಮಾತುಗಳೂ ಕೇಳಿಬಂದಿದ್ದು, ಈ ಪ್ರಕರಣ ಇದೀಗ ಕುತೂಹಲ ಕೆರಳಿಸಿದೆ.
ಶುಕ್ರವಾರ ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನ ಸಂದರ್ಭದಲ್ಲೇ ಅವರು ಇಂಥದ್ದೊಂದು ಘೋಷಣೆಯನ್ನು ಮಾಡಿದ್ದಾರೆ. ಅಂದಹಾಗೆ ಇಂಥದ್ದೊಂದು ಘೋಷಣೆಯನ್ನು ಮಾಡಿರುವುದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಎಂಪಿ ದಿನೇಶ್ ತ್ರಿವೇದಿ. ನನ್ನ ರಾಜ್ಯ (ಪಶ್ಚಿಮ ಬಂಗಾಳ)ದಲ್ಲಿ ತುಂಬಾ ಹಿಂಸೆ ಇದೆ. ನಾವಿಲ್ಲಿ ಏನನ್ನೂ ಮಾತನಾಡಲು ಆಗುತ್ತಿಲ್ಲ ಎಂದು ಅವರು ಬೇಸರವನ್ನು ಹೊರಹಾಕಿದ್ದಾರೆ.
‘ನನ್ನನ್ನು ಇಲ್ಲಿಗೆ ಕಳುಹಿಸಿದ ನನ್ನ ಪಕ್ಷಕ್ಕೆ ಆಭಾರಿ ಆಗಿದ್ದೇನೆ. ಆದರೆ ನಾನು ನನ್ನ ರಾಜ್ಯದಲ್ಲಿ ನಡೆಯುತ್ತಿರು ಹಿಂಸಾಚಾರದ ಬಗ್ಗೆ ಮಾತನಾಡಲಾಗದಷ್ಟು ಉಸಿರು ಕಟ್ಟಿಸುವ ವಾತಾವರಣದಲ್ಲಿ ಇದ್ದೇನೆ. ಇಲ್ಲಿ ಕುಳಿತುಕೊಂಡು ಕೂಡ ನೀನು ಏನೂ ಮಾಡಲಾಗದಿದ್ದರೆ ರಾಜೀನಾಮೆ ಕೊಡುವುದೇ ಮಿಗಿಲು ಎಂದು ನನ್ನ ಆತ್ಮ ಹೇಳುತ್ತಿದೆ. ಆದರೆ ನಾನು ನನ್ನ ರಾಜ್ಯದ ಜನರಿಗಾಗಿ ನನ್ನ ಕೆಲಸವನ್ನು ಮುಂದುವರಿಸುತ್ತೇನೆ’ ಎಂಬುದಾಗಿ ಅವರು ಹೇಳಿದ್ದಾರೆ. ದಿನೇಶ್ ತ್ರಿವೇದಿ ಟಿಎಂಸಿ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.