ಮಣಿಪಾಲ: “ಅಲೆ ಬುಡಿಯೆರ್ ಯೇ. ಬಲಾ ಬೊಲ್ಲ.. ಬಲಾ ಕಾಟಿ..” ವರ್ಷಗಳ ನಂತರ ತುಳುನಾಡಿನಲ್ಲಿ ಕಂಬಳದ ಕರೆ ರಂಗು ರಂಗಾಗಿ ಸಜ್ಜಾಗಿದೆ. ಕೋವಿಡ್ ಕಾರಣದಿಂದ ಈ ಬಾರಿ ಕಂಬಳ ನಡೆಯುವುದೇ ಇಲ್ಲವೇನು ಎಂದು ಬೇಸರಿಸಿದ್ದ ಕಂಬಳ ಪ್ರೇಮಿಗಳು ಮತ್ತೆ ಮೈಕೊಡವಿ ನಿಂತಿದ್ದಾರೆ. ಅನೇಕ ವರ್ಷಗಳ ಕಾಲ ಕರೆಯಲ್ಲಿ ತಮ್ಮ ಶರವೇಗದ ಓಟದಿಂದ ಗಮನ ಸೆಳೆದಿದ್ದ ಬೊಲ್ಲ, ಕುಟ್ಟಿ, ದೂಜ, ಧೋನಿ, ಪಾಂಚಾ, ಬೊಟ್ಟಿಮಾರ್, ತಾಟೆ ಮುಂತಾದ ಕೋಣಗಳು ಮತ್ತೆ ತಮ್ಮ ಪ್ರದರ್ಶನಕ್ಕೆ ಸಜ್ಜಾಗಿವೆ. ಕಳೆದ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಶ್ರೀನಿವಾಸ ಗೌಡ, ಸುರೇಶ್ ಶೆಟ್ಟಿ, ನಿಶಾಂತ್ ಶೆಟ್ಟಿ ಮತ್ತೆ ಕಚ್ಚೆ ಬಿಗಿದು ಓಡಲು ಸಿದ್ದವಾಗಿದ್ದಾರೆ.
ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಹೊಕ್ಕಾಡಿಗೋಳಿಯಲ್ಲಿ ಇಂದು ವೀರ ವಿಕ್ರಮ ಜೋಡುಕರೆ ಕಂಬಳ ನಡೆಯುತ್ತಿದೆ. ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದ್ದ ಕಂಬಳ ಋತು ಇಂದಿನಿಂದ ಮತ್ತೆ ಆರಂಭವಾಗಲಿದೆ. ಮುಂದಿನ ಏಳು ಶನಿವಾರ- ಭಾನುವಾರದಂದು ತುಳುನಾಡಿನಲ್ಲಿ ಕಂಬಳದ ಕಹಳೆ ಸದ್ದು ಮಾಡಲಿದೆ.
ಪ್ರತಿವರ್ಷ 20ರಿಂದ 23 ಕಂಬಳಗಳು ಆಯೋಜನೆಗೊಳ್ಳುತ್ತವೆ. ಕಳೆದ ಬಾರಿ 15 ಕಂಬಳಗಳು ನಡೆದಿತ್ತು. ಕಟಪಾಡಿ, ತಲಪಾಡಿ ಹಾಗೂ ತಿರುವೈಲು ಕಂಬಳಗಳು ಕಾರಣಾಂತರಗಳಿಂದ ನಡೆದಿರಲಿಲ್ಲ. ಈ ಬಾರಿ ಕಂಬಳ ವಿಳಂಬವಾಗಿ ಆರಂಭಗೊಳ್ಳುತ್ತಿದ್ದು ಕಂಬಳಗಳ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಪ್ರಸ್ತುತ ಹೊಕ್ಕಾಡಿಗೋಳಿ, ಐಕಳ, ವಾಮಂಜೂರು ತಿರುವೈಲು, ಮೂಡುಬಿದಿರೆ, ಮೀಯಾರು, ಮಂಗಳೂರು ಹಾಗೂ ವೇಣೂರು ಸೇರಿದಂತೆ ಏಳು ಕಂಬಳಗಳ ಪಟ್ಟಿ ಸಿದ್ಧವಾಗಿದೆ.

ನಡೆದಿದೆ ಸಿದ್ದತೆ: ಸರ್ಕಾರದ ಕೋವಿಡ್ ಮಾರ್ಗಸೂಚಿಗಳು ಸಡಿಲವಾದಂತೆ ಕಂಬಳ ಕ್ಷೇತ್ರದಲ್ಲೂ ಚಟುವಟಿಕೆಗಳಿಗೆ ಆರಂಭ ಸಿಕ್ಕಿತ್ತು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರ್ಕಾರ ಅನುಮತಿ ನೀಡುತ್ತಿದ್ದಂತೆ, ಕಂಬಳವೂ ಆರಂಭವಾಗುವ ನಿರೀಕ್ಷೆಯೊಂದಿಗೆ ತರಬೇತಿ ಆರಂಭಿಸಿದ್ದರು. ಕಾರ್ಕಳದ ಮಿಯಾರು, ಮೂಡುಬಿದಿರೆ ಸೇರಿದಂತೆ ಕಳೆದ ಒಂದೂವರೆ ತಿಂಗಳಿನಿಂದ ನಿರಂತರ ಅಭ್ಯಾಸ ನಡೆಸಲಾಗಿದೆ. ಇಂದಿನ ಕಂಬಳದಲ್ಲಿ ಸುಮಾರು 170ರಿಂದ 175 ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ
Laxmi News 24×7