ಬೆಂಗಳೂರು: ಮುಂದಿನ ಚುನಾವಣೆಯಲ್ಲಿ 150 ಸ್ಥಾನದ ಗುರಿಯೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ರಣತಂತ್ರ ರೂಪಿಸಿರುವ ಬಿಜೆಪಿ ಸರ್ಕಾರ ಕುರಿಗಾಹಿಗಳನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದೆ.
ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು ಆರ್ಥಿಕವಾಗಿ ಬಲವರ್ಧನೆ ಮಾಡುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೊಳಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುರಿದೊಡ್ಡಿಗೆ ಶೆಡ್ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆ ಮೇಲಿನ ಮಾಫಿಯಾದ ಹಿಡಿತ ತಪ್ಪಿಸಲು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ಚಿಂತನೆ ನಡೆಸಿದೆ. ಕುರಿ ತಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆ ನೀಡುವ ತೆಲಂಗಾಣ ಮಾದರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಸಿಎಂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಅವರನ್ನು ಭಾನುವಾರ ಮಹಾ ಮಂಡಳದ ವತಿಯಿಂದ ಸನ್ಮಾನಿಸಲಾಯಿತು.
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 20,000 ಸದಸ್ಯರು ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಪ್ರತಿ ಸದಸ್ಯರಿಗೆ 20 ಕುರಿ, ಒಂದು ಮೇಕೆ ನೀಡಲಾಗುವುದು. 1.75 ಲಕ್ಷ ರೂಪಾಯಿ ಘಟಕ ವೆಚ್ಚದಲ್ಲಿ ಶೇಕಡ 50ರಷ್ಟು ಮೊತ್ತವನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ. ಶೇಕಡ 25ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ನೀಡಲಿದೆ. ಉಳಿದ ಮೊತ್ತವನ್ನು ಫಲಾನುಭವಿ ವಂತಿಗೆಯಾಗಿ ನೀಡಬೇಕಿದೆ. ಹಾವೇರಿಯಲ್ಲಿ ಕುರಿಗಾಹಿಗಳ ಬೃಹತ್ ಸಮಾವೇಶ ನಡೆಸಲಿದ್ದು, ಎರಡು ಲಕ್ಷ ಕುರಿಗಾಹಿಗಳನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.