ಮಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು, ಬೀದಿ ದೀಪ ಸೇವೆ ಹೊರತುಪಡಿಸಿ ಉಳಿದ ಗ್ರಾಮೀಣ ಸೇವೆಗಳು ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ನ. 2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹದಲ್ಲಿ ದ.ಕ., ಉಡುಪಿಯಯ 311 ಪಿಡಿಒಗಳ ಸಹಿತ ರಾಜ್ಯದ 6,026 ಗ್ರಾ.ಪಂ.ಗಳ ಸುಮಾರು 5,600 ಪಿಡಿಒಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಧರಣಿ ಕೈಗೊಳ್ಳುವ ದಿನದಿಂದ ಅನಿರ್ದಿಷ್ಟಾವಧಿಗೆ ಕೇಂದ್ರಸ್ಥಾನ ಬಿಡಲು ಹಾಗೂ ಹೋರಾಟದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿ ಪಿಡಿಒಗಳು ಆಯಾ ಜಿ.ಪಂ. ಸಿಇಒಗೆ ಈಗಾಗಲೇ ಮನವಿ ಕೂಡ ಸಲ್ಲಿಸಿದ್ದಾರೆ. ಹೋರಾಟದಲ್ಲಿ ಭಾಗವಹಿಸಿದ ದಿನಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹಕ್ಕಿನಲ್ಲಿರುವ ರಜಾ ದಿನಗಳೆಂದು ಪರಿಗಣಿಸುವಂತೆ ಕೋರಿದ್ದಾರೆ.ಪೂರ್ಣಾವಧಿ ಪಿಡಿಒ ಇಲ್ಲದ ಪಂಚಾಯತ್‌ನಲ್ಲಿರುವ ಪ್ರಭಾರ ಪಿಡಿಒಗಳು ಕೂಡ ರಜೆ ಪಡೆದು ಮುಷ್ಕರಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ.
ಬೇಡಿಕೆಗಳೇನು?
8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗ್ರೂಪ್ “ಬಿ’ಗೆ ಮೇಲ್ದರ್ಜೆಗೇರಿಸಬೇಕು. 2006-2007ರಿಂದ 2011-2012ರ ವರೆಗೆ ಮನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಿರುವ ಪ್ರಕರಣವನ್ನು ವಾಪಸ್ ಪಡೆಯಬೇಕು. ಗ್ರಾ.ಪಂ. ಅಧಿಕಾರಿ, ನೌಕರರಿಗೆ ಹಲ್ಲೆ ನಡೆಸಿದವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಬೇಕು. ಕೊರೊನಾದಿಂದ ಮರಣ ಹೊಂದಿದ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಗ್ರಾ.ಪಂ. ಸಿಬಂದಿಗೆ ಪರಿಹಾರಧನ ತತ್‌ಕ್ಷಣ ಪಾವತಿಸಬೇಕು.
ಇಚ್ಛಿಸುವ ಜಿಲ್ಲೆಗೆ ವರ್ಗಾವಣೆ
ಅನ್ಯ ಇಲಾಖೆಯ ಕೆಲಸ ವಹಿಸುವುದನ್ನು ಸಂಪೂರ್ಣ ರದ್ದುಪಡಿಸ ಬೇಕು. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಿಯಮವನ್ನು ಕೂಡಲೇ ಜಾರಿಗೊಳಿಸಬೇಕು. 16ಎ ರದ್ದು ಮಾಡಿರುವುದರಿಂದ ಅಂತರ್ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ ಹಾಗಾಗಿ ವಿಶೇಷ ನಿಯಮಗಳನ್ನು ರಚಿಸಿ ನೌಕರರು ಇಚ್ಛಿಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆಗೆ ಅವಕಾಶ ನೀಡಬೇಕು ಹಾಗೂ ಮನರೇಗಾ ಕೂಲಿಕಾರರ ಹಾಜರಾತಿ ಪಡೆಯಲು ಬಯೋಮೆಟ್ರಿಕ್ ಜಾರಿ ಮಾಡಬೇಕು ಎಂಬುದು ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಬೇಡಿಕೆ.
ಪಿಡಿಒಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನ. 2ರಿಂದ ಬೆಂಗಳೂರು ಚಲೋ ಹಮ್ಮಿಕೊಂಡಿದ್ದೇವೆ. ಹೋರಾಟ ಮುಗಿಯುವವರೆಗೆ ಕುಡಿಯುವ ನೀರು ಹಾಗೂ ಬೀದಿದೀಪ ಸೇವೆಗಳು ಮಾತ್ರ ಲಭ್ಯವಿದ್ದು ಇನ್ನುಳಿದ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
– ನಾಗೇಶ್ ಎಂ. ಅಧ್ಯಕ್ಷರು, ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ದ.ಕ.
-ದಿನೇಶ್ ಇರಾ