ಶಿವಮೊಗ್ಗ: ರಾಜ್ಯದ ಬಹುತೇಕ ಕಡೆ ವರುಣ ಅಬ್ಬರಿಸಿದ್ದು, ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇತ್ತ ಆಗುಂಬೆ ಬಳಿ ಸಹ ಮಳೆ ವಿಪರೀತವಾಗಿ ಸುರಿಯುತ್ತಿದ್ದು, ಶಿವಮೊಗ್ಗ-ಆಗುಂಬೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮಾಲತಿ ಮತ್ತು ಸೀತಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅಪಾರ ಪ್ರಮಾಣದ ನೀರು ಆಗುಂಬೆಯ ಭಾಗಗಳ ತೋಟ, ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಶಿವಮೊಗ್ಗ-ಆಗುಂಬೆ-ಮಂಗಳೂರು ಎನ್.ಹೆಚ್ 169-ಎ ರಸ್ತೆಯನ್ನು ಆಗುಂಬೆಯ ಸೋಮೇಶ್ವರದ ಬಳಿ ಬಂದ್ ಮಾಡಲಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಸಹ ಇದೇ ಪರಿಸ್ಥಿತಿ ಇದ್ದು, ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆ ಭದ್ರಾವತಿಯ ಸೇತುವೆ ಮೇಲೆ ನೀರು ಹರಿಯಲು ಆರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ಸಂಚಾರ ಮಾಡುವುದನ್ನು ಪೊಲೀಸರು ಬಂದ್ ಮಾಡಿದ್ದಾರೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಅತಿಯಾದ ಮಳೆ ಹಿನ್ನೆಲೆ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಜಲಾಶಯಕ್ಕೆ 55 ಸಾವಿರ ಕ್ಯೂಸೆಕ್ ಒಳ ಹರಿವು ಇದೆ.
ಜಲಾಶಯದಿಂದ 47,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುತ್ತಿರುವ ಹಿನ್ನೆಲೆ ನದಿಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಇಂಜಿನಿಯರ್ ಸೂಚನೆ ನೀಡಿದ್ದಾರೆ. ಅಲ್ಲದೆ ಈಗಾಗಲೇ ಭದ್ರಾವತಿ ಸೇತುವೆ ಮೇಲೆ ನೀರು ಹರಿಯುತ್ತಿದೆ.