ನವದೆಹಲಿ,ಜೂ.9- ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ 15 ದಿನದಲ್ಲಿ ಕಳುಹಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ವಲಸೆ ಕಾರ್ಮಿಕರಿಗೆ ಉದ್ಯೋಗ ಯೋಜನೆ ಹಾಗೂ ನಿರಾಶ್ರಿತರ ತಾಣಗಳನ್ನು ಸ್ಥಾಪಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್‍ಕೃಷ್ಣ ಕೌಲ್ ಮತ್ತು ಎಂ.ಆರ್.ಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
ಎಲ್ಲೆಲ್ಲಿ ಕಾರ್ಮಿಕರು ಸಿಲುಕಿದ್ದಾರೋ ಅವರನ್ನು ತಮ್ಮ ತವರು ರಾಜ್ಯಗಳಿಗೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ 24 ಗಂಟೆಯೊಳಗೆ ರೈಲಿನ ವ್ಯವಸ್ಥೆಯನ್ನು ಬೇಡಿಕೆಗೆ ತಕ್ಕಂತೆ ಕಲ್ಪಿಸಬೇಕು. ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ತ್ರಿಸದಸ್ಯ ಪೀಠ ಆದೇಶ ಕೊಟ್ಟಿದೆ.
ಇದೇ ವೇಳೆ ಕ್ವಾರಂಟೈನ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ವಲಸೆ ಕಾರ್ಮಿಕರ ಮೇಲೆ ಹಾಕಲಾಗಿದ್ದ ಎಲ್ಲ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಇಂದು ರದ್ದುಪಡಿಸಿದೆ.ವಲಸೆ ಕಾರ್ಮಿಕ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಸೂಚನೆಗಳನ್ನು ನಿರ್ದೇಶನ ನೀಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದೆ.
ಮುಂದಿನ ಅರ್ಜಿ ವಿಚಾರಣೆಯನ್ನು ಜುಲೈನಲ್ಲಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿರುವ ಪೀಠ, ವಲಸೆ ಕಾರ್ಮಿಕರಿಗಾಗಿ ಕಲ್ಯಾಣ ಯೋಜನೆ ಮತ್ತು ಉದ್ಯೋಗ ಭದ್ರತೆಯನ್ನು ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಮುಂದಿನ ವಿಚಾರಣೆಯಲ್ಲಿ ಪರಿಗಣಿಸುವುದಾಗಿ ಹೇಳಿದೆ.