ನರಗುಂದ(ಆ.17): ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿ ಮಲಪ್ರಭಾ ಜಲಾಶಯ ಭರ್ತಿಯಾಗುತ್ತಿದ್ದು, ಈ ಭಾಗದ ರೈತರಿಗೆ ಹರ್ಷ ತಂದಿದೆ. ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ, ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಈ ಜಲಾಶಯದ ಕಾಲುವೆ ನೀರಿನ ಮೂಲಕ ಈ ಭಾಗದ ರೈತರು ಜಮೀನುಗಳನ್ನು ನೀರಾವರಿ ಮಾಡಿ ಬದುಕು ಕಟ್ಟಿಕೊಳ್ಳುತ್ತಾರೆ.
ಜಲಾಶಯ ಒಟ್ಟು 37.73 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ 32.73 ಟಿಎಂಸಿ ನೀರು ಸಂಗ್ರಹವಿದೆ. ಭರ್ತಿಯಾಗಲು 5 ಟಿಎಂಸಿ ಮಾತ್ರ ಬಾಕಿ ಇದೆ. ಸದ್ಯ ಜಲಾಶಯದ ಮೇಲ್ಭಾಗದ ಪಶ್ಚಿಮ ಘಟ್ಟದಲ್ಲಿ ಅತಿಯಾದ ಮಳೆ ಸುರಿಯುತ್ತಿರುವುದರಿಂದ 18 ರಿಂದ 21 ಸಾವಿರ ಕ್ಯುಸೆಕ್ ನೀರು ಒಳಹರಿವು ಇದೆ. ಶುಕ್ರವಾರದಿಂದ 5 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಲಾಶಯದ ಒಳ ಹರಿವು ನೋಡಿಕೊಂಡು ಹೆಚ್ಚುವರಿ ನೀರು ನದಿಗೆ ಹರಿಸಲಾಗುವುದೆಂದು ಜಲಾಶಯ ಅಧಿಕಾರಿಗಳು ಹೇಳಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಿಂದ ಮಲಪ್ರಭಾ ನದಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಲಕ ಕೂಡಲ ಸಂಗಮ ಸೇರುತ್ತದೆ. ಈ ಹಿಂದೆ ಪ್ರವಾಹಕ್ಕೆ ನೂರಾರು ಹಳ್ಳಿಗಳ ಜನತೆ ಮನೆ, ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದರು. ಈಗ ಜಲಾಶಯ ಭರ್ತಿಯಾಗುತ್ತಿದ್ದು, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಪ್ರವಾಹ ಭೀತಿ ಎದುರಾಗುತ್ತದೆ. ಹೀಗಾಗಿ ನದಿ ತೀರದ ಜನತೆ ಆತಂಕದಲ್ಲಿದ್ದಾರೆ. ಯಾವುದೇ ಸಮಯದಲ್ಲಿ ಜಲಾಶಯ ಭರ್ತಿಯಾಗಬಹುದು, ಅದಕ್ಕೆ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಹೋಗಲು ಸಿದ್ಧರಿರಬೇಕೆಂದು ತಹಸೀಲ್ದಾರ್ ಎ.ಡಿ. ಅಮರವಾದಗಿ ನದಿ ತೀರದ ಜನತೆಗೆ ಸೂಚಿಸಿದ್ದಾರೆ.