ಚಿಕ್ಕೋಡಿ(ಬೆಳಗಾವಿ): ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷ ಬಿಡುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಈ ಸುದ್ದಿಗೆ ಸ್ಪಷ್ಟನೆ ನೀಡುವ ಮೂಲಕ ಬೆಳಗಾವಿ ಸಾಹುಕಾರ ತೆರೆ ಎಳೆದಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಘ ಪರಿವಾರದಲ್ಲಿ ನನಗೆ ಸಿಗುತ್ತಿರುವ ಆಶೀರ್ವಾದವನ್ನ ಕೆಲ ವೈರಿ ಕುತಂತ್ರಿಗಳಿಗೆ ನೋಡಲು ಆಗುತ್ತಿಲ್ಲ. ಹೀಗಾಗಿ ನನ್ನ ಬಗ್ಗೆ ಪಕ್ಷ ಬಿಡುತ್ತೇನೆ ಎಂದು ಊಹಾಪೋಹಗಳನ್ನ ಎಬ್ಬಿಸಲಾಗಿದೆ ಎಂದು ಗರಂ ಆದರು.
ನನ್ನ ರಾಜಕೀಯ ಜೀವನ ಇರುವವರೆಗೆ ನಾನು ಬಿಜೆಪಿ ಪಕ್ಷದಲ್ಲಿ ಇರುತ್ತೇನೆ. ನನ್ನ ರಾಜಕೀಯ ಜೀವನ ಬಿಜೆಪಿ ಪಕ್ಷದಲ್ಲಿಯೇ ಅಂತ್ಯವಾಗುತ್ತೆ. ಸಿಎಂ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂಬುವುದು ಸತ್ಯಕ್ಕೆ ದೂರವಾದುದು. ದೇಶದಲ್ಲಿಯೇ ದಕ್ಷತೆಯಿಂದ ಯುವಕರಂತೆ ಯಡಿಯೂರಪ್ಪನವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನ ಬದಲಾವಣೆ ಮಾಡುವ ಪ್ರಮೇಯವೇ ಇಲ್ಲ. ಇದೇ ವೇಳೆ ಒಂದು ವೇಳೆ ಅವರನ್ನ ಬದಲಾವಣೆ ಮಾಡಿದರೇ ವಿರೋಧ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಇದು ದೊಡ್ಡ ವಿಷಯ ಎಂದು ಸಚಿವರು ನುಣುಚಿಕೊಂಡರು.
ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಎರಡು ಬಣಗಳು ಇರುವುದನ್ನ ಪರೋಕ್ಷವಾಗಿ ಒಪ್ಪಿಕೊಂಡ ರಮೇಶ ಜಾರಕಿಹೊಳಿ, ಮುಂಬರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕತ್ತಿ ಸಹೋದರರು ಹಾಗೂ ಬಾಲಚಂದ್ರ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದರು.
ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು 20 ವರ್ಷಗಳ ಬಳಿಕ ಮಂತ್ರಿ ಆಗಿದ್ದೇನೆ. ಅದು ಹಣೆ ಬರಹದಲ್ಲಿ ಇರಬೇಕು. ಉಮೇಶ್ ಕತ್ತಿ ಹಿರಿಯರು ಮಂತ್ರಿಗಿಂತ ಹೆಚ್ಚು ಪವರ್ ಉಮೇಶ್ ಕತ್ತಿ ಅವರಿಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಮೇಶ್ ಕತ್ತಿ ಅವರನ್ನ ಸಿಎಂ ಮಾಡಿದರೆ ಬೆಂಬಲ ನೀಡುತ್ತೀರಾ ಎಂದು ಪ್ರಶ್ನಿಸಿದಾಗ, ನಾನು ಯಡಿಯೂರಪ್ಪ ಅವರ ಜೊತೆ ಇರುತ್ತೇನೆ ಎಂದು ಹೇಳಿ ಹೊರಟರು.