ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಮೂಡಲಗಿ ತಾಲೂಕಿನ ನಾಲ್ಕು ಸೇತುವೆಗಳು ಜಲಾವೃತವಾಗಿದೆ. ಕೆಲ ಬೈಕ್ ಸವಾರರು ಅಪಾಯ ಲೆಕ್ಕಿಸದೇ ಜಲಾವೃತವಾದ ಸೇತುವೆ ಮೇಲೆಯೇ ಸಂಚರಿಸಿದ್ದಾರೆ.
ಪ್ರಮುಖವಾಗಿ ಅವರಾದಿ – ಮಹಾಲಿಂಗಾಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ಸುಣಧೋಳ -ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸೇತುವೆ, ವಡೇರಹಟ್ಟಿ-ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಮೂಡಲಗಿ-ಭೈರನಹಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿವೆ. ಪರಿಣಾಮ ಈ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚಾರ ಸ್ಥಗಿತವಾಗಿದೆ.
ಸದ್ಯ ಬಳ್ಳಾರಿ ನಾಲಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳಿಂದ ಘಟಪ್ರಭಾ ನದಿಗೆ 14,227 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಹೀಗಾಗಿ ಮೂಡಲಗಿ – ಗೋಕಾಕ ತಾಲೂಕಿನ ಭಾಗದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಘಟಪಭ್ರಾ ನದಿಯಿಂದ ಮುಳುಗಡೆಯಾಗಿರುವ ಸುಣಧೋಳಿ-ಮೂಡಲಗಿ ಸೇತುವೆ ಮೇಲೆ ಬೈಕ್ ಸವಾರರು ಸಂಚಾರ ನಡೆಸಿದ್ದಾರೆ. ಸ್ವಲ್ಪ ಆಯ ತಪ್ಪಿಬಿದ್ದರೂ ನದಿ ಪಾಲಾಗುವ ಆತಂಕ ಎದುರಾಗಿದೆ. ಜಿಲ್ಲಾಡಳಿತ ಈಗಲೇ ಕ್ರಮ ಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಗ್ರಾಮಸ್ಥರು.