ಬೆಂಗಳೂರು: ಕರುನಾಡಲ್ಲಿ ಮತ್ತೆ ವರುಣ ಮತ್ತಷ್ಟು ಭೀತಿ ಹುಟ್ಟಿಸಿದ್ದಾನೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ.ರಾಜಧಾನಿ ಬೆಂಗಳೂರಲ್ಲಿ 2 ದಿನಗಳ ಹಿಂದೆ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಕೊಂಚು ಬಿಡುವು ಕೊಟ್ಟಿದ್ದಾನೆ. ಆದರೆ ಮೋಡ ಕವಿದ ವಾತಾವರಣವಿದೆ. ಇನ್ನುಳಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಇಂಗಳಗಿ ಗ್ರಾಮದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆಯಿಂದ ನೀರನ್ನು ಹೊರಹಾಕಲು ಗ್ರಾಮಸ್ಥರು ಪರದಾಡುವಂತಾಯಿತು.
ಕರಾವಳಿ ಪ್ರದೇಶಕ್ಕೆ ಬಂದರೆ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ಪ್ರವಾಹ ಪರಿಸ್ಥಿತಿಯೇ ಉಂಟಾಗಿತ್ತು. ದಿನನಿತ್ಯ ಓಡಾಡುತ್ತಿದ್ದ ರಸ್ತೆ ಇದ್ದಕ್ಕಿದ್ದಂತೆ ಕೆರೆಯಂತೆ ಭಾಸವಾಗುತ್ತಿದೆ ಎಂದು ಜನರು ಹೊರಬರೋಕೆ ಹಿಂದೇಟು ಹಾಕುತ್ತಿದ್ದರು. ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು.
ಅಲ್ಲದೇ ಮಹಾಮಳೆಗೆ ಮಂಗಳೂರಿನ ಕೊಂಚಾಡಿಯಲ್ಲಿರುವ ಎಸೆಲ್ ಹೈಟ್ಸ್ ಎಂಬ ಫ್ಲ್ಯಾಟ್ ಹಿಂಭಾಗದ ಮಣ್ಣು ಕುಸಿತಗೊಂಡಿದೆ. ಪರಿಣಾಮ ಮಣ್ಣಿನಡಿ ಅದೆಷ್ಟೋ ವಾಹನಗಳು ಸಿಲುಕಿಕೊಂಡಿದ್ದವು. ಸುಮಾರು 12 ಅಂತಸ್ಥಿನ ಫ್ಲ್ಯಾಟ್‍ನಲ್ಲಿದ್ದ ನೂರಾರು ಮಂದಿಯನ್ನು ಸದ್ಯ ಸ್ಥಳಾಂತರ ಮಾಡಲಾಗಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಫ್ಲ್ಯಾಟ್ ಮುಂಭಾಗದ ರಸ್ತೆ ಬಂದ್ ಮಾಡಲಾಗಿದ್ದು, ಸ್ಥಳದಲ್ಲೇ ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಫ್ ಸಿಬ್ಬಂದಿ ಮೊಕ್ಕಾಂ ಹೂಡಿದೆ. ಈಗಾಗಲೇ ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದೆರೆಡು ದಿನಗಳಿಂದ ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಪರಿಣಾಮ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಇದರಿಂದ ತ್ರಿವೇಣಿ ಸಂಗಮದ ಬಳಿ ಪ್ರವಾಹ ಸೃಷ್ಟಿಯಾಗೋ ಆತಂಕ ಎದುರಾಗಿದೆ. ಕೋಳಿಕಾಡು, ಚೇರಂಗಾಲ, ಕೋರಂಗಾಲ ಗ್ರಾಮಗಳಲ್ಲಿ ಭೂ ಕುಸಿತಗೊಂಡಿರುವುದು ಗ್ರಾಮಸ್ಥರಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿಸಿದೆ.
ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದೆ. ಸದ್ಯ ಕಾರವಾರ, ಕುಮಟಾ, ಹೊನ್ನಾವರ ಸೇರಿದಂತೆ ಬಹುತೇಕ ಭಾಗದಲ್ಲಿ ಇನ್ನೆರೆಡು ದಿನ ಇದೇ ಸ್ಥಿತಿ ಇರಲಿದೆ ಅಂತ ಎಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಗೆ ಸಿಲುಕಿದ್ದ ಪರ್ಷಿಯನ್ ಬೋಟ್ ರಕ್ಷಣೆ ಮಾಡಲಾಗಿದೆ. ಸಮುದ್ರದ ಮಧ್ಯಭಾಗದಲ್ಲಿ ಸಿಲುಕಿದ್ದ ಬೋಟ್‍ನಲ್ಲಿ 24 ಮೀನುಗಾರರಿದ್ದರು. ಭಟ್ಕಳದ ಬಂದರಿನಿಂದ ಮೀನುಗಾರಿಕೆಗೆ ಕಮರುಲ್ ಬಾಹರ್ ಬೋಟ್ ತೆರಳಿದ್ದಾಗ ಘಟನೆ ನಡೆದಿದ್ದು, ಅದೃಷ್ಟವಶಾತ್ ಮೀನುಗಾರರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.