16ನೇ ವಯಸ್ಸಿನಲ್ಲಿಯೇ ಅಸಾಮಾನ್ಯವಾದ ಜ್ಞಾನವನ್ನು ವಿಜ್ಞಾನ ಕ್ಷೇತ್ರದಲ್ಲಿ ಬೆಳೆಸಿಕೊಂಡಿದ್ದಾನೆ.
ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಪ್ರಣವ ಕುಮಾರ್ ಶಶಿಕಾಂತ್ ಮಠಪತಿ ಎಂಬ ವಿದ್ಯಾರ್ಥಿ ತನ್ನ 16ನೇ ವಯಸ್ಸಿನಲ್ಲಿಯೇ ಅಸಾಮಾನ್ಯವಾದ ಜ್ಞಾನವನ್ನು ವಿಜ್ಞಾನ ಕ್ಷೇತ್ರದಲ್ಲಿ ಬೆಳೆಸಿಕೊಂಡಿದ್ದಾನೆ. ವಿಜ್ಞಾನಿಗಳೇ ಬೆರಗಾಗುವಂತಹ ಪ್ರಾಜೆಕ್ಟ್ ಗಳನ್ನ ತಯಾರಿಸಿದ್ದಾನೆ. ಈ ವಿದ್ಯಾರ್ಥಿ ಕೊಠಡಿಯ ತುಂಬಾ ವಿವಿಧ ಪ್ರಾಜೆಕ್ಟ್ ವಸ್ತುಗಳು, ಪ್ರಯೋಗಾಲಯದಂತೆ ಮಾಡಿಕೊಂಡಿದ್ದಾನೆ.
ಸದ್ಯ ಚಿಕಾಲಗುಡ್ಡ ಶಂಕರಲಿಂಗ ಸಿಬಿಎಸ್ ಶಾಲೆಯಲ್ಲಿ ಓದುತ್ತಿರುವ ಪ್ರಣವ ಕುಮಾರ್, ವಿಜ್ಞಾನ ಲೋಕವನ್ನೆ ತನ್ನ ಮನೆಯಲ್ಲಿ ಸೃಷ್ಟಿಸಿದ್ದಾನೆ. ಸಿಎನ್ ಸಿ ಮಶಿನ್, ಪೆಟ್ರೋಲ್ ಸೈಕಲ್, ಬ್ಲೂಟೂತ್ ಥ್ರೇಡ್ ರೂಲರ್ ಸೇರಿದಂತೆ ಒಂದು ನೂರಕ್ಕೂ ಅಧಿಕ ಪ್ರೊಜೆಕ್ಟ್ ತಯಾರಿಸಿದ್ದಾನೆ.ಈ ಬಾಲ ವಿಜ್ಞಾನಿ ತನ್ನ ಹುಟ್ಟುಹಬ್ಬದಲ್ಲಿ ತನ್ನ ಗೆಳೆಯರ ಕಡೆಯಿಂದ ಹಾಗೂ ಕುಟುಂಬಸ್ಥರ ಕಡೆಯಿಂದ ಯಾವುದೇ ಕಾಣಿಕೆ ತೆಗೆದುಕೊಳ್ಳದೆ, ತನ್ನ ಪ್ರಯೋಗಕ್ಕೆ ಬೇಕಾಗುವ ವಸ್ತುಗಳನ್ನು ತಾನೇ ತೆಗೆದುಕೊಳ್ಳುತ್ತಾನಂತೆ. ತನ್ನ ಪ್ರೊಜೆಕ್ಟ್ ಗೆ ಹೆಚ್ಚು ಹಣ ಖರ್ಚು ಮಾಡದೆ ಕಡಿಮೆ ಖರ್ಚಿನಲ್ಲಿ ತಯಾರಿಸುತ್ತಾನೆ. ವಿಶೇಷವಾಗಿ 5 ಸಾವಿರ ರೂ. ವೆಚ್ಚದಲ್ಲಿ ಸಿಎನ್ ಸಿ ಮಶಿನ್ (ಕಂಪ್ಯೂಟರ್ ನ್ಯುಮರಿಕಲ್ ಕಂಟ್ರೋಲ್) ತಯಾರಿಸಿದ್ದು ಇದಕ್ಕೆ ಕೇವಲ ಐದು ಸಾವಿರ ಖರ್ಚು ಮಾಡಿದ್ದಾನೆ. ಜೊತೆಗೆ ಹತ್ತು ಸಾವಿರ ರೂ. ದಲ್ಲಿ ಪೆಟ್ರೋಲ್ ಸೈಕಲ್ ತಯಾರಿಸಿದ್ದಾನೆ. ಇದು ಪ್ರತಿ ಲೀಟರಿಗೆ 40 ಕಿ.ಮಿ ಮೈಲೆಜ್ ನೀಡುತ್ತದೆಯಂತೆ. ಹೀಗೆ 100ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನ ಈ ವಿದ್ಯಾರ್ಥಿ ತಯಾರಿಸಿ ಸಾಧನೆ ಮೆರೆದಿದ್ದಾನೆ.
ಮಗನ ಪರಿಶ್ರಮಕ್ಕೆ ಬೆನ್ನುಲುಬಾಗಿ ಪ್ರಣವ ಕುಮಾರ್ ತಂದೆ-ತಾಯಿ ನಿಂತಿದ್ದಾರೆ. ತನ್ನ ಮಗ ವಿಜ್ಞಾನ ಕ್ಷೇತ್ರದಲ್ಲಿ ಏನನ್ನಾದರೂ ಸಾಧನೆ ಮಾಡಿ ದೊಡ್ಡ ವಿಜ್ಞಾನಿಯಾಗಬೇಕೆಂಬ ಬಯಕೆ ತಂದೆ-ತಾಯಿಯ ಬಯಕೆ ಆಗಿದ್ದರೆ ತನ್ನ ಸಾಧನೆಗೆ ತನ್ನ ತಾಯಿ-ತಂದೆ ಪ್ರೋತ್ಸಾಹವೇ ಕಾರಣ ಎಂದು ಪ್ರಣವ ಕುಮಾರ್ ಹೇಳುತ್ತಾನೆ.
ತನ್ನ 16 ನೇ ವಯಸ್ಸಿನಲ್ಲಿ ವಿಜ್ಞಾನ ಲೋಕದಲ್ಲಿ ಅಗಾಧ ಜ್ಞಾನ ಬೆಳೆಸಿಕೊಂಡಿರುವ ಈ ಬಾಲಕನ ಸಾಧನೆ ಅಮೋಘವಾದದ್ದು. ಇಂತಹ ಬಾಲ ಪ್ರತಿಭೆಗಳಿಗೆ ಸರ್ಕಾರ ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಿದರೆ ಪ್ರಣವ ಕುಮಾರ್ ನಂತಹ ಬಾಲ ವಿಜ್ಞಾನಿಗಳು ಹೊಸದನ್ನು ಆವಿಷ್ಕರಿಸಿ ಸಮಾಜಕ್ಕೆ ಅನುಕೂಲವಾಗುವಂತಹ ಹೊಸ ತಂತ್ರಜ್ಞಾನ ತಯಾರಿಸಲು ಸಹಕಾರಿಯಾಗಲಿದೆ.