ಮಂಡ್ಯ: ಜಿಲ್ಲೆಯಲ್ಲಿ ಸರ್ಕಾರಿ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದ್ದು, ಬಹುತೇಕ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಈ ಮೂಲಕ ಪರೀಕ್ಷೆ ಹೆಸರಿನಲ್ಲಿ ತರಗತಿ ಆರಂಭಿಸಿ ಮಕ್ಕಳ ಜೀವದ ಜೊತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಚೆಲ್ಲಾಟವಾಡುತ್ತಿವೆ.
ಜೂ.25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಒಡೆತನದ ವಿವೇಕ ವಿದ್ಯಾಸಂಸ್ಥೆಯನ್ನೂ ತೆರೆಯಲಾಗಿದ್ದು, ಮಕ್ಕಳನ್ನು ಕೂಡಿ ಹಾಕಿಕೊಂಡು ಪಾಠ ಮಾಡಲಾಗುತ್ತಿದೆ. ಅಲ್ಲದೆ ರೋಟರಿ ಎಜುಕೇಶನ್ ಸೊಸೈಟಿ, ಆದರ್ಶ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಬಹುತೇಕ ಶಾಲೆಗಳನ್ನು ತೆರೆಯಲಾಗಿದೆ. ಸಾಮಾಜೀಕ ಅಂತರ ಕಾಯ್ದುಕೊಂಡು ಪಾಠ ಮಾಡಲಾಗುತ್ತಿದೆ. ಆದರೆ ಶಿಕ್ಷಕರು ಮಾತ್ರ ಮಾಸ್ಕ್ ಧರಿಸದೆ ಬೋಧಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಶಾಲೆಗಳು ಆರಂಭವಾಗಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ತರಗತಿಗಳು ನಡೆಯುತ್ತಿವೆ. ಶಾಲೆ ತೆರೆಯಲು ಅನುಮತಿ ಇಲ್ಲದಿದ್ದರೂ ಸರ್ಕಾರದ ನಿಯಮ ಗಾಳಿಗೆ ತೂರಿ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಪ್ಪದಿದ್ದರೂ, ಒತ್ತಾಯಪೂರ್ವಕವಾಗಿ ಶಿಕ್ಷಕರು ಮಕ್ಕಳನ್ನು ಶಾಲೆಗೆ ಕರೆಸಿಕೊಂಡಿದ್ದಾರೆ. ಕೊರೊನಾ ಭಯದ ನಡುವೆಯೇ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.