ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಜಮೆ ಭಾರತದ ಹಣದ ಮೊತ್ತವು ಎರಡನೇ ವರ್ಷವೂ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಸ್ವಿಟ್ಜರ್ ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಭಾರತೀಯರು ಜಮೆ ಮಾಡುತ್ತಿದ್ದ ಮೊತ್ತ 2019ರಲ್ಲಿ ಕಡಿಮೆಯಾಗಿದೆ ಎಂದು ಹೇಳಿದೆ.
2019ರಲ್ಲಿ ಭಾರತೀಯರು 6625 ಕೋಟಿ ರೂ (899 ಮಿಲಿಯನ್ ಸ್ವಿಸ್ ಫ್ರ್ಯಾಂಕ್) ಜಮಾ ಮಾಡಿದ್ದಾರೆ. ಇದು 2018ರಲ್ಲಿ ಜಮೆಯಾದ ಶೇ.8ರಷ್ಟು ಕಡಿಮೆ. ಸತತ ಎರಡು ವರ್ಷಗಳಿಂದ ಭಾರತೀಯರು ಜಮೆ ಮಾಡುತ್ತಿದ್ದ ಮೊತ್ತದಲ್ಲಿ ಇಳಿಕೆಯಾಗಿತ್ತಿದೆ.
ಮೂರು ದಶಕಗಳಲ್ಲಿ ಈ ಎರಡು ವರ್ಷ ಸತತವಾಗಿ ಠೇವಣಿಯ ಮೊತ್ತವು ಇಳಿಕೆಯಾಗಿದೆ. ಸ್ವಿಸ್ ನ್ಯಾಶನಲ್ ಬ್ಯಾಂಕ್ ವರದಿ ಪ್ರಕಾರ, 1995ರಲ್ಲಿ ಭಾರತೀಯರು ಅತಿ ಕಡಿಮೆ ಹಣ ಅಂದ್ರೆ 723 ಮಿಲಿಯನ್ ಸ್ವಿಸ್ ಫ್ರೆಂಕ್ ಜಮಾ ಮಾಡಿದ್ದರು. 2016ರಲ್ಲಿ 676, ಮತ್ತು 2019ರಲ್ಲಿ 899 ಮಿಲಿಯನ್ ಸ್ವಿಸ್ ಫ್ರ್ಯಾಂಕ್ ಜಮೆ ಆಗಿದೆ.
ವರದಿಗಳ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಜಮೆ ಆಗುತ್ತಿದ್ದ ಹಣದಲ್ಲಿಯೂ ಇಳಿಕೆಯಾಗಿದೆ. ಇತ್ತ ಅಮೆರಿಕೆ ಮತ್ತು ಬ್ರಿಟನ್ ನಿಂದ ಹೆಚ್ಚು ಹಣ ಸಂಗ್ರಹವಾಗುತ್ತಿದೆ. ಸ್ವಿಸ್ ಬ್ಯಾಂಕಿನಲ್ಲಿ ಪಾಕಿಸ್ತಾನದವರ ಹಣ ಶೇ.45 ರಿಂದ ಶೇ.41ಕ್ಕೆ (ಅಂದಾಜು 3 ಸಾವಿರ ಕೋಟಿ ರೂ)ಇಳಿಕೆಯಾಗಿದೆ. ಬಾಂಗ್ಲಾದೇಶದ ಹಣವೂ ಶೇ.2ರಷ್ಟು ಇಳಿಕೆಯಾಗಿ ಶೇ.60.5ಕ್ಕೆ (ಅಂದಾಜು 4,500 ಕೋಟಿ ರೂ)ತಲುಪಿದೆ