ಕೊಪ್ಪಳ, ನ.23: ಬಿಜೆಪಿಯಿಂದಲೇ ಕಾಂಗ್ರೆಸ್‍ಗೆ ಸೇರ್ಪಡೆ ಆಗುವವರು ಬಹಳಷ್ಟು ಮಂದಿ ಇದ್ದಾರೆ. ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗುವವರು ಯಾರೂ ಇಲ್ಲ. ಬಿಜೆಪಿಯಿಂದಲೇ ಕಾಂಗ್ರೆಸ್‍ಗೆ ಬರುತ್ತಾರೆ ಕಾದು ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪರಿಗೆ ತಮ್ಮ ಸರಕಾರ ಉಳಿಸಿಕೊಳ್ಳುವುದು ಮುಖ್ಯವಾಗಿದೆಯೇ ಹೊರತು ರೈತರ ಹಿತ ಅವರಿಗೆ ಮುಖ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ-ರಾಯಚೂರು ಭಾಗದಲ್ಲಿ ಬೆಳೆದ ಭತ್ತಕ್ಕೆ ಬೆಲೆ ಸಿಗುತ್ತಿಲ್ಲ. ಈಗಿರುವ ಭತ್ತದ ಬೆಲೆ ಜೊತೆಗೆ ಹೆಚ್ಚುವರಿ 500 ರೂ. ಬೆಂಬಲ ನೀಡಬೇಕು. ಪ್ರತಿ ದಿನವೂ ಬೆಲೆ ಏರಿಕೆ ಆಗುತ್ತಿದೆ. ಈಗ ವಿದ್ಯುತ್ ದರ ಸಹ ಹೆಚ್ಚಳ ಮಾಡಲಾಗಿದೆ. ಸರಕಾರ ಭತ್ತಕ್ಕೆ ಹೆಚ್ಚುವರಿ 500 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಪ್ರತಿ ಯೂನಿಟ್ ಗೆ 40 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದ್ದು, ಕೊರೋನ ವರ್ಷದಲ್ಲಿ ಜನರು ತುಂಬ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಶುಲ್ಕ ಇಳಿಕೆ ಮಾಡಬೇಕು ಎಂದು ಸರಕಾರವನ್ನು ಅವರು ಒತ್ತಾಯಿಸಿದರು.
ಶಾಸಕರಾದ ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುμÁ್ಪ ಅಮರನಾಥ್, ಕೆಪಿಸಿಸಿ ಕಾರ್ಯದರ್ಶಿ ಶಿವಕುಮಾರ್ ಮೆಣಸಿನಕಾಯಿ ಸೇರಿ ಹಲವರು ಉಪಸ್ಥಿತರಿದ್ದರು.