ಅಬುಭಾಬಿ: ಕೊರೊನಾ ಕಾರಣದಿಂದ ಈ ಬಾರಿಯ ಐಪಿಎಲ್‍ನ ಪ್ರಶಸ್ತಿ ಹಣವನ್ನು ಬಿಸಿಸಿಐ ಕಡಿಮೆ ಮಾಡಿದೆ. 2019ರಲ್ಲಿ ನೀಡಿದ ಪ್ರಶಸ್ತಿ ಹಣದ ಅರ್ಧದಷ್ಟು ಹಣವನ್ನು ಈ ಬಾರಿ ಗೆದ್ದ ತಂಡಕ್ಕೆ ನೀಡಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.
ಈ ವರ್ಷ ಇಡೀ ವಿಶ್ವಕ್ಕೆ ಕಂಟಕವಾಗಿ ಕಾಡಿದ ಕೊರೊನಾ ಕ್ರಿಕೆಟ್ ಜಗತ್ತನ್ನು ಸ್ತಬ್ಧವಾಗುವಂತೆ ಮಾಡಿತ್ತು. ಈ ಕಾರಣದಿಂದಲೇ ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿ ಹಲವಾರು ಅಡೆತಡೆಗಳ ಮಧ್ಯೆ ಆರಂಭವಾಗಿ ಇಂದು ಮುಕ್ತಾಯದ ಅಂಚಿಗೆ ಬಂದು ನಿಂತಿದೆ. ಕೊರೊನಾ ಕಾರಣದಿಂದ ಆರು ತಿಂಗಳು ತಡವಾಗಿ ಆರಂಭವಾದರೂ, ಯುಎಇಯಲ್ಲಿ ಐಪಿಎಲ್ ಆಯೋಜನೆ ಮಾಡಿ ಬಿಸಿಸಿಐ ಗೆದ್ದಿದೆ.
ಆದರೆ ಕೊರೊನಾ ಕಾರಣದಿಂದ ಈ ಬಾರಿ ಐಪಿಎಲ್ ಪ್ರಶಸ್ತಿ ಹಣವನ್ನು ಕಡಿಮೆ ಮಾಡುವುದಾಗಿ ಬಿಸಿಸಿಐ ತಿಳಿಸಿದೆ. ಕಳೆದ ಭಾರೀ ಐಪಿಎಲ್ ವಿಜೇತ ತಂಡಕ್ಕೆ ಟ್ರೋಫಿ ಮತ್ತು 20 ಕೋಟಿ ರೂ. ನಗದು ಬಹುಮಾನ ನೀಡಲಾಗಿತ್ತು. ಆದರೆ ಈ ಬಾರಿ ಈ ಹಣವನ್ನು ಅರ್ಧದಷ್ಟು ಕಡಿತ ಮಾಡಿರುವ ಬಿಸಿಸಿಐ ಐಪಿಎಲ್-2020ಯಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಮತ್ತು 10 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಸುತ್ತೋಲೆ ಹೊರಡಿಸಿದೆ.
ಈ ವಿಚಾರವಾಗಿ ಎಲ್ಲ ಫ್ರಾಂಚೈಸಿಗಳಿಗೆ ಸುತ್ತೋಲೆ ಕಳುಹಿಸಿರುವ ಬಿಸಿಸಿಐ, ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮದಿಂದ ಐಪಿಎಲ್-2020 ಪ್ರಶಸ್ತಿ ಹಣವನ್ನು ಕಡಿಮೆ ಮಾಡಲಾಗಿದೆ. ಈ ಬಾರಿ ಗೆದ್ದ ತಂಡ 20 ಕೋಟಿಯ ಬದಲು 10 ಕೋಟಿ ರೂ., ರನ್ನರ್ ಅಫ್ ತಂಡಕ್ಕೆ 12.5 ಕೋಟಿಯ ಬದಲು 6.25 ಕೋಟಿ ರೂ ಮತ್ತು ಪ್ಲೇ ಆಫ್ ಆಡಿದ ತಂಡಗಳಿಗೆ 8.75 ಕೋಟಿಯ ಬದಲು 4.375 ಕೋಟಿ ನೀಡುವುದಾಗಿ ತಿಳಿಸಿದೆ.
ಪ್ರತಿ ವರ್ಷ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆರೆಂಜ್ ಕ್ಯಾಪ್ ವಿಜೇತನಿಗೆ 10 ಲಕ್ಷ, ಅತೀ ಹೆಚ್ಚು ವಿಕೆಟ್ ಪಡೆದ ಪರ್ಪಲ್ ಕ್ಯಾಪ್ ವಿಜೇತ ಬೌಲರಿಗೆ 10 ಲಕ್ಷ ಮತ್ತು ಎಮರ್ಜಿಂಗ್ ಪ್ಲೇಯರ್ ಗೆ 10 ಲಕ್ಷ ನೀಡಲಾಗುತ್ತಿತ್ತು. ಆದರೆ ಈ ಪ್ರಶಸ್ತಿಯ ಹಣದ ಬಗ್ಗೆ ಬಿಸಿಸಿಐ ಯಾವ ಸೂಚನೆಯನ್ನು ಸುತ್ತೋಲೆಯಲ್ಲಿ ಹೊರಡಿಸಿಲ್ಲ. ಈ ಬಾರೀ 670 ರನ್ ಹೊಡೆದಿರುವ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅಂತಯೇ 29 ವಿಕೆಟ್ ಪಡೆದ ರಬಾಡಾ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.