ಶಿವಮೊಗ್ಗ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವಂತೆ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಎಲ್.ಕೆ.ಅಡ್ವಾಣಿ ಅವರು 7 ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಡ್ವಾಣಿ ಅವರ ಈ ಎಲ್ಲ ಜನಪರ ಸೇವೆ ಗುರುತಿಸಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕು. ಇದು ರಾಜ್ಯದ ಸಾವಿರಾರು ಮಂದಿಯ ಅಭಿಲಾಷೆ ಸಹ ಆಗಿದೆ ಎಂದು ಡಿ.ಎಚ್ ಶಂಕರಮೂರ್ತಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಅಡ್ವಾಣಿಯವರು ಆರ್‍ಎಸ್‍ಎಸ್, ಭಾರತೀಯ ಜನಸಂಘ ಹಾಗೂ ಬಿಜೆಪಿ ಮೂಲಕ ತಾಯ್ನಾಡಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಹಾಗೂ ಕೊಡುಗೆ ನೀಡಿದ್ದಾರೆ. ಸಾರ್ವಜನಿಕ ಹಾಗೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಮ್ಮ ವಿಶಿಷ್ಠ ಜ್ಞಾನ ಹಾಗೂ ಅನುಭವದ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಲ್ಲದೆ ಅಡ್ವಾಣಿಯವರದ್ದು ಅಪರೂಪದ ವ್ಯಕ್ತಿತ್ವವಾಗಿದೆ. ಹೀಗಾಗಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಕಳೆದ ಐದು ದಶಕಗಳಿಂದ ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ, ಲಕ್ಷಾಂತರ ಜನರ ರೀತಿ ನಾನೂ ಸಹ ಅಡ್ವಾಣಿಯರಿಗೆ ಹತ್ತಿರವಾಗಿದ್ದೆ. ಹೀಗಾಗಿ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಸಾರ್ವಜನಿಕ ಭಾಷಣಗಳನ್ನು ಭಾಷಾಂತರ ಮಾಡುತ್ತಿದ್ದೆ ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.