ತುಮಕೂರು: ಕೊರೊನಾ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದ್ದ ಮಾಜಿ ಶಾಸಕರೊಬ್ಬರು ನಿಯಮಗಳನ್ನು ಮರೆತು ಸಂಭ್ರಮಾಚರಣೆ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಾಮಾಜಿ ಅಂತರ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ತುಮಕೂರಿನ ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆ ಇಂದು ನಿಗದಿಯಾಗಿತ್ತು. ಚುನಾವಣೆಯಲ್ಲಿ ಬಿಜೆಪಿಯ ಕವಿತಾ ರಮೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು ಸಂಭ್ರಮಾಚರಣೆ ಮಾಡಿದ್ದರು. ಇದನ್ನು ಕಂಡು ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಲು ಮನವಿ ಮಾಡಿದ ಎಸ್‍ಐ ಮಂಜುನಾಥ್ ಅವರ ಮೇಲೂ ಮಾಜಿ ಶಾಸಕರು ಗರಂ ಆಗಿದ್ದರು.
ಮಾಜಿ ಶಾಸಕ ಸುರೇಶ್ ಗೌಡ ಮತ್ತು ಅವರ ಕಾರ್ಯಕರ್ತರು ಜೊತೆಗೆ ಸೇರಿ ಜೈಕಾರವನ್ನು ಕೂಗಿ ಸಾಮಾಜಿಕ ಅಂತರ ಮರೆದು ಗುಂಪುಗೂಡಿದ್ದರು. ಸಾಮಾಜಿಕ ಅಂತರವನ್ನ ಮರೆತು ಗುಂಪು ಗುಂಪಾಗಿ ನಿಂತು ಸಂಭ್ರಮಾಚರಣೆ ಮಾಡಿದ್ದು ಅಲ್ಲದೇ ಹಲವರು ಮಾಸ್ಕ್ ಧರಿಸದೆ ಇರುವುದು ಕಂಡು ಬಂದಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸರ್ಕಾರ, ಸಾರ್ವಜನಿಕರು ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣ ಮಾಡುವುದರ ಬಗ್ಗೆ ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಸ್ವಯಂ ಜವಾಬ್ದಾರಿ ವಹಿಸಿಕೊಂಡು ತಮ್ಮ ಹಿಂಬಾಲಕರಿಗೆ ಮಾದರಿಯಾಗ ಬೇಕಿದ್ದ ಮಾಜಿ ಶಾಸಕರು ಮಾತ್ರ ತಮ್ಮ ಕರ್ತವ್ಯವನ್ನು ಮರೆತಿದ್ದರು. ಈಗಾಗಲೇ ಕೊರೊನಾ ಸಮುದಾಯದ ಹಂತಕ್ಕೆ ತಲುಪಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇಂತಹ ಸಂಭ್ರಮಾಚರಣೆಗಳಿಂದ ಮತ್ತಷ್ಟು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.