ವಿಜಯನಗರ: ಸಂಸ್ಕೃತಿ ಎಂಬುದು ಕೇವಲ ಗುರುತಾಗದೇ ಜಾಗತಿಕ ಸಾಂಗತ್ಯವಾಗಿ ಮಾರ್ಪಡಿಸಿಕೊಳ್ಳಲು ಜಿ-20 ಸಭೆ ಮಾರ್ಗವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಆರಂಭಗೊಂಡ 3ನೇ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ತಂಡದ(ಸಿಡಬ್ಲ್ಯೂಜಿ) ಸಭೆಯನ್ನು ಇಂದು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯನ್ನು ಉದ್ಘಾಟಿಸಿದ ಪ್ರಹ್ಲಾದ್ ಜೋಶಿನಾಲ್ಕು ಪ್ರಮುಖ ಆದ್ಯತೆಗಳಾದ ಆಯಾ ದೇಶಗಳ ಕಲಾಕೃತಿಗಳನ್ನು ಮೂಲ ಸ್ಥಾನಕ್ಕೆ ಮರಳಿಸುವುದು, ಭಾರತದ ಆಯುರ್ವೇದ ಪದ್ಧತಿ ಪ್ರಮುಖ ಔಷಧಗಳ ಹಕ್ಕುಸ್ವಾಮ್ಯ(ಪೇಟೆಂಟ್) ಇತರರ ಪಾಲಾಗುವಿಕೆ ತಪ್ಪಿಸುವುದು, ಸ್ಥಾನಿಕ ಕಲಾಕೃತಿಗಳ ಪ್ರದರ್ಶನದ ಮೂಲಕ ಜಾಗತಿಕವಾಗಿ ಪ್ರಸ್ತುತತೆ ಜೊತೆಗೆ ಆರ್ಥಿಕ ಬಲವರ್ಧನೆ ಕೈಗೊಳ್ಳುವುದು ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಡಿಜಿಟಲ್ ರೂಪ ನೀಡುವ ಮೂಲಕ ಸಾಂಸ್ಕೃತಿಕ ಏಳಿಗೆ ಹೊಂದುವುದಾಗಿದೆ. ಈ ಮೂಲಕ ಪ್ರಮುಖ ಉದ್ದೇಶಗಳನ್ನು ಗುರುತಿಸಿ, ಅದರ ಕುರಿತಾಗಿ ಚರ್ಚಿಸಿ ಕ್ರಮ ಆಧಾರಿತ ಶಿಫಾರಸು ಪಡೆಯಲು ಮುಂದಾಗಬೇಕಿದೆ. ನೀತಿ ರಚನೆ ಹೃದಯಭಾಗದಲ್ಲಿ ಸಂಸ್ಕೃತಿ ಇರಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದರು.
3ನೇ ಜಿ20 ಸಾಂಸ್ಕೃತಿಕ ಕಾರ್ಯಕಾರಿ ತಂಡದ ಸಭೆಸದಸ್ಯ ರಾಷ್ಟ್ರವಾಗಿರುವ ಭಾರತ ಕೇವಲ ಸಭೆಯಲ್ಲಿ ಭಾಗವಹಿಸುವಿಕೆ ಮಾತ್ರವಲ್ಲದೇ ಸಂಸ್ಕೃತಿಯ ಜಾಗತಿಕ ಬದಲಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವತ್ತ ದಿಟ್ಟ ಹೆಜ್ಜೆ ಇಡಲಿದೆ. ಏಕೀಕೃತ ಜಗತ್ತನ್ನು ಪ್ರದರ್ಶಿಸುವ, ಸಾಂಸ್ಕೃತಿಕ ಪರಂಪರೆಯು ಭೂತಕಾಲದ ಆಧಾರಸ್ತಂಭ ಮತ್ತು ಭವಿಷ್ಯದ ಮಾರ್ಗವಾಗಿದೆ. ವೈವಿಧ್ಯತೆಯಿಂದ ಕೂಡಿದ ಜಗತ್ತಿನಲ್ಲಿ, ಸಾಂಸ್ಕೃತಿಕ ಪರಂಪರೆಯ ಹಂಚಿಕೆ ಸರ್ವರನ್ನು ಬಂಧಿಸುವ ಎಳೆಯಾಗಿದೆ. ಸಭೆಯಲ್ಲಿ ಭಾಗವಹಿಸುವ ರಾಷ್ಟ್ರಗಳು ಏಕತೆಯ ಶಕ್ತಿ, ವೈವಿಧ್ಯತೆಯ ಸೌಂದರ್ಯ ಮತ್ತು ಮಾನವ ಅಭಿವೃದ್ಧಿಗಾಗಿ ಸಂಸ್ಕೃತಿ ಹೊಂದಿರುವ ಬೃಹತ್ ಸಾಮರ್ಥ್ಯವನ್ನು ಎಂದಿಗೂ ಸ್ಮರಿಸಬೇಕು ಎಂದು ಕರೆ ನೀಡಿದರು.