ಚಿಕ್ಕೋಡಿ(ಬೆಳಗಾವಿ): ಹಿರೇಕೋಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಚಿಕ್ಕೋಡಿ ಪಟ್ಟಣದಲ್ಲಿ ಜೈನ್ ಧರ್ಮದ ಶ್ರಾವಕ ಶ್ರಾವಕಿಯರು ಬೃಹತ್ ಪ್ರತಿಭಟನೆ ನಡೆಸಿದರು.
ಚಿಕ್ಕೋಡಿ ಪಟ್ಟಣದ ಆರ್‌ಡಿ ಮೈದಾನದಿಂದ 15 ಸಾವಿರಕ್ಕೂ ಹೆಚ್ಚು ಜನರು ಕೊಲ್ಲಾಪುರ ನಾಂದಣಿ ಮಠದ ಜೀನಸೇನ ಭಟ್ಟಾರಕ ಹಾಗೂ ವರೂರು ಮಠದ ಧರ್ಮಸೇನಾ ಭಟ್ಟಾರಕ, ಮತ್ತು ಕೊಲ್ಲಾಪುರದ ಕೀರ್ತಿಸೇನ ಭಟ್ಟಾರಕರ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಆರ್‌ಡಿ ಹೈಸ್ಕೂಲ್ ಮೈದಾನದಿಂದ ಮಹಾವೀರ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ಚಿಕ್ಕೋಡಿ ಎಸಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಯಿತು. ಇನ್ಮುಂದೆ ಜೈನ್ ಮುನಿಗಳಿಗೆ ರಕ್ಷಣೆ ಸಿಗಬೇಕು, ಹಾಗೂ ಶ್ರೀಗಳ ಕೊಲೆ ಮಾಡಿರುವ ಹಂತಕರಿಗೆ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಒತ್ತಾಯಿಸಿ ಭಟ್ಟಾರಕ ಸ್ವಾಮೀಜಿಗಳು ಎಸಿ ಮಾಧವ ಗೀತೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ, ನಾದಿನಿ ಮಠದ ಜೀನಸೇನ್ ಭಟ್ಟಾರಕ ಶ್ರೀಗಳು ಮಾತನಾಡಿ, ಭಾರತದ ಕಾನೂನಿನ ಮೇಲೆ ನಾವು ತುಂಬಾ ಗೌರವ ಹೊಂದಿದ್ದೇವೆ. ಇದರಿಂದ ಇವತ್ತು ಸಮಾಜ ಬಾಂಧವರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಮತ್ತು ಜೈನ ಸಮಾಜದ ಮುನಿ, ಮಹಾರಾಜರಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.