ಬೆಳಗಾವಿ – ಬೆಳಗಾವಿ ಜಿಲ್ಲಾ ಕೇಂದ್ರ ಮಧ್ಯವರ್ತಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಇಲ್ಲವೇ ಬುಧವಾರ ಮಹತ್ವದ ಸಭೆ ನಡೆಯಲಿದೆ.
ನಿಗದಿಯಂತೆ ನವೆಂಬರ್ 6ರಂದು ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಕತ್ತಿ ಬ್ರದರ್ಸ್ ಮತ್ತು ಜಾರಕಿಹೊಳಿ ಬ್ರದರ್ಸ್ ನೇತೃತ್ವದ ಬಣ ಮತ್ತು ಸವದಿ ಹಾಗೂ ಜೊಲ್ಲೆ ನೇತೃತ್ವದ ಬಣಗಳ ಮಧ್ಯೆ ಪೈಪೋಟಿಗೆ ಕಣ ಸಜ್ಜಾಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಇದೊಂದು ಭಾರಿ ಕುತೂಹಲಕರ ಚುನಾವಣೆಯಾಗಲಿದೆ ಎಂದೇ ಭಾವಿಸಲಾಗಿದೆ.
ಚುನಾವಣೆ ಕಣಕ್ಕಿಳಿಯುವ ಎರಡೂ ಬಣಗಳ ಬಹುತೇಕ ಮುಖಂಡರು ಬಿಜೆಪಿಯವರೇ. ಅಲ್ಲದೆ, ಸರಕಾರದಲ್ಲಿ ಮಹತ್ವದ ಸ್ಥಾನಗಳನ್ನು ಹೊಂದಿರುವವರು ಎರಡೂ ಬಣಗಳಲ್ಲಿದ್ದಾರೆ. ಲಕ್ಷ್ಮಣ ಸವದಿ ಯಡಿಯೂರಪ್ಪ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರೆ, ಶಶಿಕಲಾ ಜೊಲ್ಲೆ, ರಮೇಶ ಜಾರಕಿಹೊಳಿ ಕೂಡ ಸಂಪುಟದಲ್ಲಿದ್ದಾರೆ. ರಾಜ್ಯಸರಕಾರವನ್ನೇ ಅಲ್ಲಾಡಿಸುವ ಮಟ್ಟಕ್ಕೂ ಹೋಗಬಹುದು ಎನ್ನುವ ಚರ್ಚೆ ಕೂಡ ನಡೆದಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಆರ್ ಎಸ್ಎಸ್ ಮಧ್ಯಪ್ರವೇಶ ಮಾಡಿದೆ. ಎಲ್ಲರೂ ಸೇರಿ ಅವಿರೋಧ ಆಯ್ಕೆ ಮಾಡಿಕೊಳ್ಳಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸಲಹೆ ನೀಡಿದೆ. ಸಂಘದ ಹಿರಿಯರಾಗಿರುವ ಅರವಿಂದರಾವ್ ದೇಶಪಾಂಡೆ ಎರಡೂ ಬಣಗಳ ಮುಖಂಡರ ಸಭೆ ನಡೆಸಿ ಒಟ್ಟಾಗಿ ಹೋಗುವಂತೆ, ಅವಿರೋಧ ಆಯ್ಕೆ ನಡೆಸುವಂತೆ ಸಲಹೆ ನೀಡಿದ್ದಾರೆ. ಎಲ್ಲರೂ ಬಿಜೆಪಿ ಪಾಳಯದಲ್ಲಿರುವುದರಿಂದ ಈ ಬಾರಿ ಚುನಾವಣೆ ಬೇಡ. ಎಲ್ಲರೂ ಒಂದಾಗಿ ಹೋಗಬೇಕು ಎಂದಿದ್ದಾರೆ.
ಬಾಲಚಂದ್ರ ಜಾರಕಿಹೊಳಿ, ಈರಣ್ಣ ಕಡಾಡಿ, ಉಮೇಶ ಕತ್ತಿ, ರಮೇಶ ಕತ್ತಿ ಒಂದು ಗುಂಪಿನಿಂದ, ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆ ಮತ್ತೊಂದು ಗುಂಪಿನಿಂದ ಸಭೆಯಲ್ಲಿ ಭಾಗವಹಿಸಿದ್ದರು. ಅರವಿಂದರಾವ್ ದೇಶಪಾಂಡೆಯವರ ಸಲಹೆಗೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ.