ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿತರಿಂದಲೂ ಹಣ ಪಡೆದು, ಇತ್ತ ಸರ್ಕಾರಕ್ಕೂ ಬಿಲ್ ಪಾವತಿಸಿ ಎಂದು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ದಾಖಲಾತಿ ಸಲ್ಲಿಸಿದೆ. ಈ ಮೂಲಕ ಎರಡೂ ಕಡೆಯಿಂದ ಹಣ ಹೊಡೆಯುವ ಪ್ಲಾನ್ ಮಾಡಿಕೊಂಡಿದ್ದ ಆಸ್ಪತ್ರೆಯ ನಿಜ ಬಣ್ಣ ಬಯಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ. ದಿನೇ ದಿನೇ ಏರುತ್ತಿರೋ ಕೊರೊನಾ ಸೋಂಕಿತರ ಸಂಖ್ಯೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಹೀಗಾಗಿ ಸರ್ಕಾರವೇ ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಉಚಿತ ಚಿಕಿತ್ಸೆ ನೀಡಿ ಅದರ ವೆಚ್ಚವನ್ನ ಆಯುಷ್ಮಾನ್ ಭವ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ನಾವು ಖಾಸಗಿ ಆಸ್ಪತ್ರೆಗೆ ಕೊಡುತ್ತೇವೆ ಅಂತ ತಿಳಿಸಿದೆ.
ಸುರಕ್ಷ ಆರೋಗ್ಯ ರಕ್ಷ ಯೋಜನೆಯಡಿ ನೋಂದಾಯಿಸಿಕೊಂಡ ಚಿಕ್ಕಬಳ್ಳಾಪುರ ನಗರದ ಅನನ್ಯ-ಜೀವನ್ ಖಾಸಗಿ ಆಸ್ಪತ್ರೆಗೆ ಕೊರೊನಾ ಸೋಂಕಿತರನ್ನ ಸ್ವತಃ ಜಿಲ್ಲಾಡಳಿತವೇ ದಾಖಲು ಮಾಡಿತ್ತು. ಈಗ ಸರ್ಕಾರದಿಂದ ಜೀವನ್-ಅನನ್ಯ ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತರಿಂದಲೂ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿರುವ ಆಸ್ಪತ್ರೆ ಮಾಲೀಕ ಐಎಸ್ ರಾವ್, ಸರ್ಕಾರಕ್ಕೂ ತಮ್ಮ ಆಸ್ಪತ್ರೆಯಲ್ಲಿ ನೀವು ದಾಖಲು ಮಾಡಿದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಅದರ ಲಕ್ಷಾಂತರ ರೂಪಾಯಿ ವೆಚ್ಚವನ್ನ ಪಾವತಿಸುವಂತೆ ದಾಖಲಾತಿಗಳನ್ನ ಸಲ್ಲಿಸಿಕೊಂಡಿದ್ದಾರೆ.
ಆಯುಷ್ಮಾನ್ ಭವ ಹಾಗೂ ಆರೋಗ್ಯ ಕರ್ನಾಟಕ (ಎಬಿಎಆರ್ ಕೆ) ಯೋಜನೆಯಡಿ ತಮಗೆ ಹಣ ಮಂಜೂರು ಮಾಡುವಂತೆ ಆಸ್ಪತ್ರೆ ಮಾಲೀಕ ಐಎಸ್ ರಾವ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಕೊರೊನಾ ಸೋಂಕಿತರ ಕಡೆಯಿಂದಲೂ ಲಕ್ಷ ಲಕ್ಷ ಬಿಲ್ ವಸೂಲಿ ಮಾಡಿಕೊಂಡಿದ್ದಾರೆ. ಅನನ್ಯ ಆಸ್ಪತ್ರೆಯಲ್ಲಿ 43 ಕೊರೊನಾ ಸೋಂಕಿತರನ್ನ ಸರ್ಕಾರ ದಾಖಲಿಸಿದೆ ಎನ್ನಲಾಗಿದ್ದು, ಇದರಲ್ಲಿ 11 ಮಂದಿಯ ಚಿಕಿತ್ಸಾ ವೆಚ್ಚ ಪಾವತಿಸುವಂತೆ ಎಬಿಎಆರ್‍ಕೆ ಗೆ ದಾಖಲೆಗಳನ್ನ ಸಲ್ಲಿಸಿಕೊಂಡಿದ್ದಾರೆ.
ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಬಿಎಆರ್‍ಕೆ ನಿರ್ಗಮಿತ ಸಂಯೋಜಕಿ ಶ್ವೇತಾ ಎಂಬವರು ಅನನ್ಯ ಆಸ್ಪತ್ರೆ ಮಾಲೀಕರ ಗೋಲ್ ಮಾಲ್ ಪತ್ತೆ ಹಚ್ಚಿ ಸುರಕ್ಷ ಆರೋಗ್ಯ ಸಮಿತಿಗೆ ಆಸ್ಪತ್ರೆಗೆ ದುಡ್ಡು ಪಾವತಿಸಿದ ರೋಗಿಯ ಸಂಬಂಧಿಕರಿಂದ ದೂರು ಕೊಡಿಸಿದ್ದಾರೆ. ಇದೆಕೆಲ್ಲಾ ಸಂಯೋಜಕಿ ಶ್ವೇತಾನೇ ಕಾರಣ. ನನ್ನ ಬಳಿ ಪ್ರತಿ ಪೇಷೆಂಟ್ ಗೆ ತಲಾ 5,000 ರೂ. ಲಂಚ ಕೇಳಿದ್ದರು. ನಾನು ಕೊಡಲ್ಲ ಅಂದಿದ್ದಕ್ಕೆ ಈ ರೀತಿ ದೂರು ಕೊಡಿಸಿದ್ದಾರೆ ಎಂದು ಅನನ್ಯ ಆಸ್ಪತ್ರೆ ಮಾಲೀಕ ಐ.ಎಸ್.ರಾವ್ ಆರೋಪಿಸುತ್ತಾರೆ.