ಬೆಂಗಳೂರು: ನಗರದಲ್ಲಿ ಬೈಕ್‌ಸ್ಟಂಟ್ ಮಾಡಿ ಕೇಸ್ ಹಾಕಿಸಿಕೊಳ್ಳುವವರ ಪೈಕಿ ಅಪ್ರಾಪ್ತರ ಪಾಲು ಹೆಚ್ಚುತ್ತಲೇ ಇದೆ. ಪ್ರಸಕ್ತ ವರ್ಷ ಜ.1 ರಿಂದ ಮೇ 31ರ ನಡುವೆ ಬೈಕ್ ಸ್ಟಂಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದವರ ಪೈಕಿ ಶೇ.20 ರಷ್ಟು ಸವಾರರು ಅಪ್ರಾಪ್ತರಾಗಿದ್ದಾರೆ.
2020ರಲ್ಲಿ ಶೇ.9ರಷ್ಟು , 2021ರಲ್ಲಿ ಶೇ.13ರಷ್ಟು ಅಪ್ರಾಪ್ತರು ಬೈಕ್‌ಸ್ಟಂಟ್ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪೈಕಿ ಕೆಲವರಿಗೆ ಪಾಲಕರೇ ಬೈಕ್ ಕೊಡಿಸಿದ್ದರೆ, ಇನ್ನು ಕೆಲವರು ಸಂಬಂಧಿಕರಿಂದ ಹಾಗೂ ಸ್ನೇಹಿತರಿಂದ ಬೈಕ್‌ಗಳನ್ನು ಪಡೆದಿದ್ದಾರೆಂದು ಪೋಲಿಸ್ ಮೂಲಗಳು ತಿಳಿಸಿವೆ.
ಪಾಲಕರಿಗೆ ದಂಡ:
ಬನ್ನೇರುಘಟ್ಟ ರಸ್ತೆಯಲ್ಲಿ ತನ್ನ ತಂದೆಯ ಗೇರ್‌ಲೆಸ್ ಸ್ಕೂಟರ್‌ನಲ್ಲಿ ವೀಲಿಂಗ್ ಮಾಡಿದ್ದ 16 ವರ್ಷದ ಬಾಲಕನ ವಿರುದ್ಧ ಇತ್ತೀಚೆಗೆ ಹುಳಿಮಾವು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ತಂದೆಯನ್ನು ಠಾಣೆಗೆ ಕರೆಯಿಸಿಕೊಂಡಿದ್ದರು. ಈ ವೇಳೆ ಬಾಲಕನ ತಂದೆ ತನ್ನ ಮಗ ಇಂತಹ ಕೃತ್ಯ ಮಾಡಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದರು. ಆದಾಗ್ಯೂ ಸಾಕ್ಷಿ ಆಧರಿಸಿ ಪೊಲೀಸರು ಮೋಟಾರು ವಾಹನ ಕಾಯಿದೆ 180ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಬಳಿಕ ನ್ಯಾಯಾಲಯವು ಬಾಲಕನಿಗೆ ಸ್ಕೂಟರ್ ನೀಡಿದ್ದಕ್ಕೆ ತಂದೆಗೆ 5,000 ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಪೊಲೀಸರ ಪ್ರಕಾರ, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ 25,000 ರೂ.ವರೆಗೂ ದಂಡ ವಿಧಿಸಬಹುದಾಗಿದೆ. ಸೆಕ್ಷನ್ 180ರ ಅನ್ವಯ ನಿಯಮ ಉಲ್ಲಂಘನೆಗಾಗಿ ದಂಡ ಅಥವಾ ಮೂರು ತಿಂಗಳ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಕೆಲ ಪ್ರಕರಣಗಳಲ್ಲಿ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ