ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಬಳಿ ನಡೆದಿದ್ದ ದಿನಸಿ ಅಂಗಡಿ ಮಾಲೀಕನ ಕೊಲೆ ಪ್ರಕರಣವನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇದಿಸಿದ್ದು, ಕೊಲೆಗಾರನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇವನಹಳ್ಳಿ ತಾಲೂಕು ಐಬಸಾಪುರ ಗ್ರಾಮದ ನಿವಾಸಿಯಾಗಿದ್ದ ನಿರಂಜನಮೂರ್ತಿ(55) ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಕ್ರಾಸ್ ನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಇವರು ಆಗಸ್ಟ್ 27 ರಂದು ಜಂಗಮಕೋಟೆ-ಹೊಸಕೋಟೆ ಮಾರ್ಗದ ರಸ್ತೆಬದಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹದ ಮೇಲೆ ಚಾಕು ಇರಿತದ ಗುರುತುಗಳಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ಶಿಡ್ಲಘಟ್ಟ ಸಿಪಿಐ ಸುರೇಶ್ ಕುಮಾರ್ ಹಾಗೂ ಎಸ್‍ಐ ಲಿಯಾಖತ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಪ್ರಕರಣದಲ್ಲಿ ಮೃತ ನಿರಂಜನಮೂರ್ತಿ ಇತ್ತೀಚೆಗೆ ದಿನಸಿ ಅಂಗಡಿಯ ಜೊತೆ ಜೊತೆಗೆ ಹಳೆಯ ಬೈಕ್ ಹಾಗೂ ಕಾರು ಖರೀದಿಸಿ ಮರು ಮಾರಾಟ ಮಾಡುವ ಸೈಡ್ ಬ್ಯುಸಿನೆಸ್ ಶುರು ಮಾಡಿದ್ದರು. ಹೀಗಾಗಿ ನವೀನ್ ಕುಮಾರ್ ಎಂಬಾತನ ಬಳಿ ಓಮ್ನಿ ಕಾರೊಂದನ್ನ ಖರೀದಿಸಿದ್ದರು. ಈ ಕಾರಿಗೆ 2 ಲಕ್ಷದ 85 ಸಾವಿರ ಕೊಡುವಂತೆ ನವೀನ್ ಹೇಳಿದ್ನಂತೆ. ಆದರೆ ಇಲ್ಲ ಅಷ್ಟೆಲ್ಲಾ ನಾನು ಕೊಡಲ್ಲ ಕೊಡೋದು 2 ಲಕ್ಷ ಮಾತ್ರ ಅಂತ ಹೇಳಿದ್ದರಂತೆ.
ಈ ವ್ಯವಹಾರ ಸಂಬಂಧ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಏನ್ ಮಾಡ್ತಿಯೋ ಮಾಡ್ಕೊ ಹೋಗು ಅಂತ ನವೀನ್ ಗೆ ಅವಾಚ್ಯ ಶಬ್ದಗಳಿಂದ ನಿರಂಜನಮೂರ್ತಿ ನಿಂದಿಸಿದ್ದರಂತೆ. ಇದೇ ಕಾರಣಕ್ಕೆ ನಿರಂಜನಮೂರ್ತಿ ಮೇಲೆ ಕೋಪಗೊಂಡು ದ್ವೇಷ ಸಾರಿದ ನವೀನ್ ಕುಮಾರ್, ಪ್ಲಾನ್ ಮಾಡಿ ನಿರಂಜನಮೂರ್ತಿ ಅಂಗಡಿ ಬಾಗಿಲು ಹಾಕಿಕೊಂಡು ಸಂಜೆ ಮನೆಗೆ ಹೋಗೋದನ್ನ ಕಾದು ಕುಳಿತಿದ್ದಾನೆ.
ಅಲ್ಲದೆ ನಿರಂಜಮೂರ್ತಿಯನ್ನ ಅಡ್ಡಗಟ್ಟಿ ಗಲಾಟೆ ಮಾಡಿದ್ದಾನೆ. ಬಳಿಕ ಕಾರಿನಲ್ಲಿ ಕೂರಿಸಿಕೊಂಡು ಮಾತಾಡ್ತಾ ಮಾತಾಡ್ತಾ ಮಾತು ಮಾತಿಗೆ ಬೆಳೆದು ಕುತ್ತಿಗೆಗೆ ಬಲವಾಗಿ ಚಾಕುವಿನಿಂದ ಇರಿದುಬಿಟ್ಟಿದ್ದಾನೆ. ತದನಂತರ ಮೈಯೆಲ್ಲಾ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿ ಮೃತದೇಹ ಅಲ್ಲೇ ರಸ್ತೆ ಬದಿ ಬಿಸಾಡಿ ಪರರಾಯಾಗಿದ್ದಾನೆ.
ಈ ಸಂಬಂಧ ಸದ್ಯ ನವೀನ್ ನನ್ನ ಬಂಧಿಸಿರುವ ಪೊಲೀಸರು ಆತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.