ಬೆಂಗಳೂರು: ಪ್ರವಾಹದಿಂದಾಗಿ ಈ ಬಾರಿ ಸಹ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, 8,071 ಕೋಟಿ ರೂ.ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪ್ರವಾಹದ ಹಾನಿಯ ಸಮೀಕ್ಷೆಗೆ ಕೇಂದ್ರ ಗೃಹ ಮಂತ್ರಾಲಯದ ಕೆ.ವಿ.ಪ್ರತಾಪ್ ನೇತೃತ್ವದ ತಂಡ ಆಗಮಿಸಿತ್ತು. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ತಂಡ ಭೇಟಿ ಮಾಡಿ ವಿವರ ಪಡೆಯಿತು. ಈ ವೇಳೆ ರಾಜ್ಯದಲ್ಲಿ ಹಾನಿಯಾಗಿರುವ ಕುರಿತು ಸಿಎಂ ವಿವರಿಸಿದರು.
ಈ ಬಾರಿಯ ಪ್ರವಾಹದಿಂದಾಗಿ ರಾಜ್ಯದಲ್ಲಿ ಒಟ್ಟು 8,071 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. 2018 ಮತ್ತು 2019 ರಲ್ಲಿಯೂ ರಾಜ್ಯದಲ್ಲಿ ಭಾರಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ 22 ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಬಾರಿಯ ಪ್ರವಾಹದಲ್ಲಿ ಸುಮಾರು 4.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕಗಳು, ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿಸಿದರು.