ಬೆಂಗಳೂರು: ರಾಜ್ಯದಲ್ಲಿ ಯಾವುದೇ ಪರೀಕ್ಷೆಗಳಿಗೂ ಹಿಜಾಬ್ ಧರಿಸಿ ಹಾಜರಾಗಲು ಅವಕಾಶ ನೀಡುವುದಿಲ್ಲ. ಇದು ಬೋರ್ಡ್ ಪರೀಕ್ಷೆಗಳಿಗೂ ಅನ್ವಯಿಸುತ್ತದೆ. ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಅದೇ ಆದೇಶಾನುಸಾರ ಪರೀಕ್ಷೆಗೆ ಹಾಜರಾಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಕಳೆದ ವಾರ ತನ್ನ ಮಹತ್ವದ ತೀರ್ಪಿನಲ್ಲಿ, ‘ಹಿಜಾಬ್ ಇಸ್ಲಾಂನ ಅಗತ್ಯ ಆಚರಣೆಯಲ್ಲ’ ಎಂದು ಸ್ಪಷ್ಟಪಡಿಸಿದ್ದು ವಿದ್ಯಾರ್ಥಿಗಳ ಅರ್ಜಿಯನ್ನು ವಜಾಗೊಳಿಸಿತ್ತು. ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಹಿಜಾಬ್‌ಗೆ ರಕ್ಷಣೆ ಇದೆ ಎಂದು ವಿದ್ಯಾರ್ಥಿಗಳ ಪರ ವಕೀಲರು ವಾದಿಸಿದ್ದರು.