ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ (Belagavi civic elections) ಫಲಿತಾಂಶ ಬಂದು ಎರಡು ತಿಂಗಳು ಕಳೆದಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸೋಲಲು ಕಾರಣ ಏನು ಎಂಬುದನ್ನು ಸತೀಶ್ ಜಾರಕಿಹೊಳಿ (Satish Jarkiholi) ಈಗ ಪರಾಮರ್ಶೆ ಮಾಡಿದ್ದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ 22 ನಿಮಿಷದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಅಂಕಿ ಅಂಶ ಸಮೇತ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬಿಜೆಪಿ ತನ್ನ ಸಾಧನೆಯಿಂದ ಮಹಾನಗರ ಪಾಲಿಕೆಯಲ್ಲಿ ಗೆಲುವು ದಾಖಲಿಸಿಲ್ಲ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿನ ಹೊಂದಾಣಿಕೆ ಕೊರತೆಯಿಂದ ಬಿಜೆಪಿ ಗೆದ್ದಿದೆ ಎಂದಿದ್ದಾರೆ. ನಮ್ಮದೇ ಪಕ್ಷದ ಬೆಳಗಾವಿಯ ಒಬ್ಬ ನಾಯಕನ ಕಾರಣದಿಂದ ಚುನಾವಣೆ ಸೋತಿದ್ದೀವಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಶಾಸಕ ಫಿರೋಜ್ ಸೇಠ್ (Ex MLA Feroz sait) ವಿರುದ್ಧ ಮುಗಿಬಿದ್ದಿದ್ದಾರೆ.
‘ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಬೆಳಗಾವಿಯ ನಮ್ಮ ಪಕ್ಷದ ಓರ್ವ ಮುಖಂಡ ಸಹಕಾರ ಕೊಡಲಿಲ್ಲ. ಹೀಗಾಗಿ ಇಂದು ಕಾಂಗ್ರೆಸ್ ಪಕ್ಷ ತಲೆ ತಗ್ಗಿಸುವಂತಾಗಿದೆ. ಬೆಳಗಾವಿಯಲ್ಲಿರುವ ಒಬ್ಬ ವ್ಯಕ್ತಿಯಿಂದ ಇದಾಗಿದೆ. ಆ ವ್ಯಕ್ತಿ ಬೆಳಗಾವಿ ಕಾಂಗ್ರೆಸ್ ನನ್ನ ಮನೆಯಲ್ಲಿ ಇರಬೇಕು. ನಾನು ನಂತರ ನನ್ನ ಮಗ ಬಳಿಕ ಮೊಮ್ಮಗ ಆಳಬೇಕೆಂಬ ಮೆಂಟಾಲಿಟಿಯಿಂದ ಇಂದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದಿದ್ದಾರೆ. ಸದ್ಯ ಈ ಹೇಳಿಕೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತರಹೇವಾರು ಚರ್ಚೆಗೆ ಕಾರಣವಾಗಿದೆ.
ಅದೇ ನಾಯಕನಿಂದ ಸೋಲಾಯ್ತು
ಮಹಾನಗರ ಪಾಲಿಕೆ ಚುನಾವಣೆ ಅಷ್ಟೇ ಅಲ್ಲ. ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿಯೂ (Belagavi Loksabha By Election) ಅದೇ ನಾಯಕನಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ತಾವು ಸೋಲಬೇಕಾಯಿತು ಅಂತಾ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.