ಹಾಸನ: ಬಾಂಬೆಯಿಂದ ಬಂದವರನ್ನು ಹೆಚ್ಚು ದಿನ ಕ್ವಾರಂಟೈನ್ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಹೊರರಾಜ್ಯದಿಂದ ಬಂದವರ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಮುಂಬೈಯಿಂದ ಬಂದವರನ್ನು ಕ್ವಾರಂಟೈನ್‍ನಲ್ಲಿ ಇಟ್ಟು ನೆಗೆಟಿವ್ ವರದಿ ಬಂದ ನಂತರವೇ ಮನೆಗೆ ಕಳುಹಿಸಲಾಗುವುದು. ಹೊರರಾಜ್ಯದಿಂದ ಬಂದವರನ್ನು ಈಗ ಏಳು ದಿನ ಕ್ವಾರಂಟೈನ್ ಮಾಡಲಾಗುತ್ತಿದೆ. ಹೆಚ್ಚುದಿನ ಕ್ವಾರಂಟೈನ್ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಇದೇ ವೇಳೆ ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ದುಡಿಯುವ ಭರವಸೆ ನೀಡಿದರು. ನಾನು ಈ ಊರಿನ ಅಳಿಯ, ನನ್ನ ಕ್ಷೇತ್ರಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಹಾಸನ ಜಿಲ್ಲೆಗೂ ಕೊಡುತ್ತೇನೆ. ನಾನು ಹಾಸನಕ್ಕೆ ಬಂದಾಗ ಒಂದೆರೆಡು ದಿನ ಇಲ್ಲೇ ಇದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು. ಬಿಜೆಪಿಯ ರಾಜ್ಯಸಭೆ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ಹೈ ಕಮಾಂಡ್ ತೆಗೆದುಕೊಂಡ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.
Laxmi News 24×7