ಮೈಸೂರು: ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ತನಿಖೆ ವಿಚಾರದಲ್ಲಿ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಹಾಗೂ ಹೋರಾಟದ ವಿಚಾರದಲ್ಲಿ ಸರ್ಕಾರದಿಂದ ನನಗೆ ಬೆಂಬಲ ಸಿಕ್ಕಿಲ್ಲ. ಜ್ಯೂಬಿಲಿಯೆಂಟ್ ವಿಚಾರದಲ್ಲಿ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ಹೇಳಲು ಯಾರಿಗೂ ಧೈರ್ಯವಿಲ್ಲ. ಕಂಪನಿಯದ್ದು ತಪ್ಪೇ ಇಲ್ಲ ಎಂಬಂತೆ ಬಿಂಬಿಸಿ ನನ್ನನ್ನು ತಪ್ಪಿತಸ್ಥನಂತೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಂದ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದೆ. ನೇಮಕ ಪ್ರಕ್ರಿಯೆ ವಿಳಂಬವಾಗಿದ್ದಕ್ಕೆ ತನಿಖೆ ಹಾದಿ ತಪ್ಪಿದೆ ಎಂದು ಅವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಇಲಾಖೆಗಳು ಹರ್ಷಗುಪ್ತಾ ಅವರಿಗೆ ಸಹಕಾರ ನೀಡಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹರ್ಷಗುಪ್ತಾ ಅವರಂಥ ಅಧಿಕಾರಿಯೇ ಏನೂ ಮಾಡಲು ಸಾಧ್ಯವಾಗಿಲ್ಲ ಎಂದರೆ ಏನು ಹೇಳೋಕಾಗುತ್ತೆ. ತನಿಖೆಗೆ ಸಹಕರಿಸದಿರುವುದು ಎಲ್ಲೋ ಒಂದು ಕಡೆ ನಿರಾಸೆಯಾಗಿದೆ ಎಂದರು.
ರೋಗಿ ನಂ.52 ನಿಂದ ಸರ್ಕಾರದ ಬೊಕ್ಕಸಕ್ಕೆ 8 ಕೋಟಿ ರೂ. ನಷ್ಟವಾಗಿದೆ. ಕಂಪನಿ ಕೆಲಸ ಶುರುಮಾಡಿದೆ. ನಾಳೆ ಮತ್ತೆ ಪುನರಾವರ್ತನೆ ಆಗಲ್ಲ ಅನ್ನೋದು ಏನು ಗ್ಯಾರೆಂಟಿ. ನನ್ನ ಸ್ವಾರ್ಥಕ್ಕಾಗಿಯೋ ಅಥವಾ ಲಾಭಕ್ಕಾಗಿಯೋ ನಾನು ಹೋರಾಟ ಮಾಡಿಲ್ಲ. ರೋಗಿ ನಂ.52 ನಂಜನಗೂಡು ಹೆಸರನ್ನು ಹೀನಾಯವಾಗಿ ಹಾಳು ಮಾಡಿದ್ದಾನೆ. ಅತ್ಯಾಚಾರಕ್ಕಿಂತ ಹೆಚ್ಚು ಹೀನಾಯವಾಗಿ ಎಫೆಕ್ಟ್ ಆಗಿದೆ. ಆತನಿಗೆ ನೋಟಿಸ್ ನೀಡುವ ಬದಲು ಸಸ್ಪೆಂಡ್ ಮಾಡಬೇಕಿತ್ತು ಎಂದು ಹೇಳಿದ್ದಾರೆ ಒತ್ತಾಯಿಸಿದ್ದಾರೆ.