ಭಾರತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕು ಮತ್ತು ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಬೇಕು ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಬೆಳಗಾವಿಯಲ್ಲಿ ಚಾಲನೆ ಸಿಕ್ಕಿದೆ. ಗಣಪತ್ ಗಲ್ಲಿಯ ಶ್ರೀ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗೋಭಕ್ತರು ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ.
ಭಾರತ ಭೂಮಿಯಿಂದ ಗೋಹತ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಮತ್ತು ಗೋಮಾಳ ಭೂಮಿಯನ್ನು ಸಂರಕ್ಷಿಸಲು ಆಗ್ರಹಿಸಿ ದೇಶಾದ್ಯಂತ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಇಂದು ಬೆಳಗಾವಿಯ ಪ್ರಸಿದ್ಧ ಗಣಪತ್ ಗಲ್ಲಿಯ ಶ್ರೀ ಗಣೇಶನ ದೇವಸ್ಥಾನದಲ್ಲಿ ಪ್ರಾರ್ಥನಾ ಪತ್ರಗಳನ್ನು ದೇವರಿಗಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. 2027ರ ಏಪ್ರಿಲ್ 27ರಂದು ಭಾರತದ ಸುಮಾರು ಐದೂವರೆ ಸಾವಿರ ತಾಲೂಕುಗಳಿಂದ ರಾಷ್ಟ್ರಪತಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಪವಿತ್ರ ಕಾರ್ಯಕ್ಕೆ ವಿಘ್ನನಿವಾರಕನ ಆಶೀರ್ವಾದ ಪಡೆಯಲಾಯಿತು.
ಅಭಿಯಾನದ ಕುರಿತು ಮಾತನಾಡಿದ ಗೋರಕ್ಷಕ ನಿಲೇಶ್ ಅವರು, ಏಪ್ರಿಲ್ 27ರಂದು ಬೆಳಗಾವಿಯಲ್ಲಿ ಶಾಂತಿಯುತ ಮೆರವಣಿಗೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಅಭಿಯಾನವು ಪ್ರತಿಯೊಬ್ಬ ಸನಾತನ ಧರ್ಮಿಯನ ಕರ್ತವ್ಯವಾಗಿದ್ದು, ಗೋಹತ್ಯೆ ನಿಷೇಧ ಮತ್ತು ಗೋವುಗಳ ಸುರಕ್ಷತೆಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಗೋಮಾತೆಯ ಗೌರವಕ್ಕಾಗಿ ನಡೆಯುತ್ತಿರುವ ಈ ‘ಗೋ ಸಮ್ಮಾನ್ ಅಭಿಯಾನ’ವು ಈಗ ಜನತಾ ಚಳುವಳಿಯಾಗಿ ಮಾರ್ಪಡುತ್ತಿದೆ.
Laxmi News 24×7