ಚಿಕ್ಕಮಗಳೂರು: ಕಳೆದ ಬಾರಿ ತಿಂಗಳುಗಟ್ಟಲೇ ಬಂದ್ ಆಗಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶಿಸಿದ್ದಾರೆ.
ಕಳೆದ ಬಾರಿ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನ ಹಲವೆಡೆ ಬೆಟ್ಟ-ಗುಡ್ಡಗಳು ಕುಸಿದಿದ್ದವು. ತಿಂಗಳುಗಟ್ಟಲೇ ಚಾರ್ಮಾಡಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಕುಸಿದಿದ್ದ ಬೆಟ್ಟಗುಡ್ಡಗಳ ಮಣ್ಣನ್ನು ತೆಗೆಯಲು ಮೂರ್ನಾಲ್ಕು ಜೆಸಿಬಿಗಳು ತಿಂಗಳುಗಟ್ಟಲೇ ಕೆಲಸ ಮಾಡಿದ್ದವು. ಅಷ್ಟೆ ಅಲ್ಲದೆ ರಸ್ತೆ ಕೂಡ ಕುಸಿದಿದ್ದು ಮತ್ತೆ ಸಂಚಾರ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿತ್ತು.
ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾತ್ಕಾಲಿಕವಾಗಿ ಲಘು ವಾಹನಗಳು ಸಂಚರಿಸುವಂತೆ ದುರಸ್ಥಿ ಮಾಡಿತ್ತು. ತದನಂತರ ಎಲ್ಲ ರೀತಿಯ ವಾಹನಗಳು ಓಡಾಟ ಮುಂದುವರಿಸಿದ್ದವು. ಈ ವರ್ಷವೂ ಕಳೆದೊಂದು ವಾರದಿಂದ ಚಾರ್ಮಾಡಿ ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾಡಳಿತ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಚಾರ್ಮಾಡಿ ಘಾಟಿಯಲ್ಲಿ ಮುಂದಿನ ಆದೇಶದವರೆಗೆ ಯಾವುದೇ ರೀತಿ ವಾಹನಗಳು ಸಂಚರಿಸುವಂತಿಲ್ಲ ಎಂದು ಆದೇಶಿಸಿದೆ.
ಯಾಕಂದರೆ ಇಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಬೆಟ್ಟಗುಡ್ಡಗಳು ತೀವ್ರ ತೇವಾಂಶದಿಂದ ಕೂಡಿದ್ದು, ಮತ್ತೆ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಪ್ರವಾಸಿಗರು ಹಾಗೂ ಜನಸಾಮಾನ್ಯರ ಹಿತದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ಈ ಆದೇಶ ಜಾರಿಗೆ ತಂದಿದೆ. ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಮಂಜು ಸುರಿಯುತ್ತಿದ್ದು, ರಸ್ತೆಗಳಿಗೆ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಿದ್ದು, ರಾತ್ರಿ ವೇಳೆ ಸಂಚಾರ ಸೂಕ್ತವಲ್ಲ ಎಂದು ಜಿಲ್ಲಾಡಳಿತ ಸಂಚಾರ ನಿಷೇಧಿಸಿದೆ.