ಚಾಮರಾಜನಗರ: ಬಾವಿಗೆ ಬಿದ್ದಿದ್ದ ಚಿರತೆ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹಸಗೂಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಿಂಗರಾಜಪ್ಪ ಅವರಿಗೆ ಸೇರಿದ ಜಮೀನಿನಲ್ಲಿದ್ದ ಪಾಳು ಬಾವಿಗೆ ಕಳೆದ ಐದು ದಿನಗಳ ಹಿಂದೆ ಚಿರತೆಯೊಂದು ಬಿದ್ದಿತ್ತು. ವಿಷಯ ತಿಳಿದ ಬಂಡೀಪುರ ಅರಣ್ಯಾಧಿಕಾರಿಗಳು ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಬಾವಿಯ ಪೊಟರೆಯೊಂದಕ್ಕೆ ಚಿರತೆ ಸೇರಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಹೊರಬರಲಿಲ್ಲ. ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿದೆ.
ಪೊಟರೆ ಬಳಿ ಕಲ್ಲು ಕೊರೆದು ಚಿರತೆ ಹೊರಗೆ ಬರುವಂತೆ ಪ್ರಯತ್ನಿಸಲಾಗಿತ್ತು. ಅಗ್ನಿಶಾಮಕ ದಳದಿಂದ ಪೊಟರೆಗೆ ನೀರು ಸಹ ಹಾಕಲಾಗಿತ್ತು. ಚಿರತೆ ಮಾತ್ರ ಇದಾವುದಕ್ಕೂ ಜಗ್ಗಿರಲಿಲ್ಲ. ಚಿರತೆ ಸೆರೆಗೆ ನಾಯಿ ಕಟ್ಟಿದ ಬೋನನ್ನು ಬಾವಿಯೊಳಗೆ ಇಳಿಬಿಡಲಾಗಿತ್ತು. ಬಾವಿಯ ಪೊಟರೆಯೊಳಗೆ ಅಡಗಿ ಕುಳಿತ ಚಿರತೆ ಐದು ದಿನಕಳೆದರೂ ಬೋನಿಗೆ ಬಿದ್ದಿರಲಿಲ್ಲ. ಚಿರತೆಯ ಸುಳಿವೇ ಇಲ್ಲದ ಕಾರಣ ಹೇಗೋ ಬಾವಿಯಿಂದ ಮೇಲೆ ಬಂದು ಹೊರಟು ಹೋಗಿರಬಹುದೆಂದು ಭಾವಿಸಲಾಗಿತ್ತು. ಆದರೂ ಬಾವಿಯೊಳಗೆ ಏಣಿಯನ್ನು ಇಳಿಬಿಡಲಾಗಿತ್ತು. ಬಾವಿಯ ಹೊರ ಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಕಳೆದ ರಾತ್ರಿ ಏಣಿ ಹತ್ತಿಕೊಂಡು ಬಾವಿಯಿಂದ ಮೇಲೆ ಬಂದಿರುವ ಚಿರತೆ, ಕಾಡಿನತ್ತ ಹೋಗಿದೆ. ಚಿರತೆ ಏಣಿ ಮೂಲಕ ಬಾವಿಯಿಂದ ಹೊರಬರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಅರಣ್ಯದಂಚಿನಲ್ಲಿ ಸಮಪರ್ಕ ಅನೆಕಂದಕ ಹಾಗೂ ಸೋಲಾರ್ ತಂತಿ ಬೇಲಿ ಅಳವಡಿಸಿ ಕಾಡುಪ್ರಾಣಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.